
ಬೆಂಗಳೂರು: ಆಂಧ್ರಪ್ರದೇಶದ ತಿರುಮಲದಲ್ಲಿ ಕರ್ನಾಟಕ ಸರ್ಕಾರ ನಿರ್ಮಿಸುತ್ತಿರುವ ಅತಿಥಿ ಗೃಹ ಹಾಗೂ ಛತ್ರದ ಕಾಮಗಾರಿಗಳನ್ನು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಪರಿಶೀಲಿಸಿದರು.
ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿಯ ಎಸ್.ಆರ್. ವಿಶ್ವನಾಥ್, ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಶರವಣ ಅವರು ತಿರುಮಲದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿನ ನ್ಯೂನತೆಗಳನ್ನು ಪ್ರಸ್ತಾಪಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ರಾಮಲಿಂಗಾರೆಡ್ಡಿ ಅವರು ಭರವಸೆ ನೀಡಿದ್ದರು.
ತಿರುಮಲಕ್ಕೆ ಸೋಮವಾರ ಭೇಟಿ ನೀಡಿದ್ದ ರಾಮಲಿಂಗಾರೆಡ್ಡಿ, ಟಿಟಿಡಿ ಅಧಿಕಾರಿಗಳೊಂದಿಗೆ ಕರ್ನಾಟಕ ಸರ್ಕಾರದ ಮೂರು ಅತಿಥಿ ಗೃಹಗಳು ಹಾಗೂ ಛತ್ರದ ಪರಿಶೀಲನೆ ನಡೆಸಿದರು. 2026ರ ಮಾರ್ಚ್ ಅಂತ್ಯಕ್ಕೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದರು.
ತಿರುಮಲದಲ್ಲಿನ ಭೂಮಿಯ ಗುತ್ತಿಗೆ, ಟಿಟಿಡಿ ವಾಪಸ್ ಪಡೆದ ಭೂಮಿಗೆ ಬದಲಾಗಿ ತಿರುಪತಿಯಲ್ಲಿ 30 ಸೆಂಟ್ಸ್ ಪರ್ಯಾಯ ಭೂಮಿ ಒದಗಿಸುವುದು, ತಿರುಮಲದಲ್ಲಿ ಟಿಟಿಡಿ ಕೈಗೊಂಡ ನಾಗರಿಕ ಕಾಮಗಾರಿಗಳ ಮೇಲೆ ವಿಧಿಸಲಾಗುವ ಸೆಂಟೇಜ್ ಶುಲ್ಕಕ್ಕೆ ವಿನಾಯಿತಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಎಲ್ಲಾ ಸ್ನಾನಗೃಹಗಳಿಗೆ ಪಿವಿಸಿ ಛಾವಣಿ ಒದಗಿಸುವುದು, ಛತ್ರಕ್ಕೆ ಅಗ್ನಿಶಾಮಕ ಇಲಾಖೆಯಿಂದ ಪ್ರಮಾಣಪತ್ರ ಪಡೆಯುವುದು, ಎಚ್‌ಟಿ ಲೈನ್ ವಿದ್ಯುತ್ ಅನುಮತಿ ಸೇರಿದಂತೆ ಕರ್ನಾಟಕದ ಭಕ್ತರಿಗೆ ದರ್ಶನ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.