ADVERTISEMENT

ಒಂಬತ್ತು ಲಕ್ಷ ಮನೆ ನಿರ್ಮಾಣದ ಗುರಿ: ವಿ. ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 20:55 IST
Last Updated 8 ಏಪ್ರಿಲ್ 2022, 20:55 IST
ವಿ.ಸೋಮಣ್ಣ
ವಿ.ಸೋಮಣ್ಣ   

ಬೆಂಗಳೂರು: ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ 2022–23ನೇ ಆರ್ಥಿಕ ವರ್ಷದಲ್ಲಿ ಒಂಬತ್ತು ಲಕ್ಷ ಮನೆಗಳನ್ನು ನಿರ್ಮಿಸುವ ಗುರಿಯೊಂದಿಗೆ ಸರ್ಕಾರ ಕೆಲಸ ಮಾಡುತ್ತಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಸಕ್ತ ವರ್ಷ ಐದು ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ. ಹಿಂದಿನ ವರ್ಷಗಳಲ್ಲಿ ಮಂಜೂರಾತಿ ನೀಡಿದ್ದು, ಬಾಕಿ ಇರುವ ನಾಲ್ಕು ಲಕ್ಷ ಮನೆಗಳೂ ಸೇರಿದಂತೆ ಒಂಬತ್ತು ಲಕ್ಷ ಮನೆಗಳ ನಿರ್ಮಾಣವನ್ನು ಈ ವರ್ಷವೇ ಪೂರ್ಣಗೊಳಿಸಲಾಗುವುದು’ ಎಂದರು.

2022–23ರಲ್ಲಿ ಪ್ರಧಾನಮಂತ್ರಿಆವಾಸ್ ಯೋಜನೆಯಡಿ 2.40 ಲಕ್ಷ ಮನೆ ನಿರ್ಮಿಸುವ ಗುರಿ ಇದೆ. ಶೋಷಿತ ಮತ್ತು ತುಳಿತಕ್ಕೊಳಗಾದ ಸಮಾಜದವರು, ಭಾಷಾ ಅಲ್ಪಸಂಖ್ಯಾತರಿಗೆ ಮತ್ತು ಸಣ್ಣ ಸಮುದಾಯಗಳ 65 ಸಾವಿರ ಕುಟುಂಬಗಳನ್ನು ಗುರುತಿಸಲಾಗಿದೆ. 33,000 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ ಎಂದು ಹೇಳಿದರು.

ADVERTISEMENT

2018ರಲ್ಲಿ ಕೇಂದ್ರ ಸರ್ಕಾರ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ರಾಜ್ಯಕ್ಕೆ 18 ಲಕ್ಷ ಮನೆಗಳನ್ನು ಮಂಜೂರು ಮಾಡಿತ್ತು. ಆದರೆ, ರಾಜ್ಯ ಸರ್ಕಾರವು ಕೇಂದ್ರದ ತಂತ್ರಾಂಶ ಬಳಸದೇ ಸ್ವಂತ ತಂತ್ರಾಂಶ ಬಳಸಿತು. ಇದರಿಂದ ವಸತಿ ಯೋಜನೆಗಳ ಅನುಷ್ಠಾನದಲ್ಲಿ ಲೋಪಗಳಾದವು. ಕೇಂದ್ರ ಸರ್ಕಾರ 1.40 ಲಕ್ಷ ಮನೆಗಳ ಮಂಜೂರಾತಿ ರದ್ದು ಮಾಡಿತ್ತು. ಸಮಸ್ಯೆ ಪರಿಹರಿಸಿ, ರದ್ದಾದ ಮನೆಗಳನ್ನೂ ಮತ್ತೆ ಮಂಜೂರು ಮಾಡಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

‘ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಿಯಮಗಳನ್ನು ಪಾಲಿಸದೇ ಕೆಲಸ ಮಾಡಿದ್ದೇ ಸಮಸ್ಯೆಗೆ ಕಾರಣ. ಈ ಕುರಿತು ಸಂಪೂರ್ಣವಾಗಿ ತನಿಖೆ ನಡೆಸಿ, ಸಮಸ್ಯೆಯನ್ನು ಪತ್ತೆಹಚ್ಚಲಾಗಿದೆ. ಅರ್ಹ ಬಡ ಕುಟುಂಬಗಳಿಗೆ ಮನೆಗಳನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಸೋಮಣ್ಣ ಹೇಳಿದರು.

ಬೆಂಗಳೂರು ನಗರದ ಬಡವರಿಗಾಗಿ ರೂಪಿಸಿರುವ ಮುಖ್ಯಮಂತ್ರಿಯವರ ಒಂದು ಲಕ್ಷ ಮನೆಗಳ ನಿರ್ಮಾಣ ಯೋಜನೆಯಲ್ಲೂ ಸಮಸ್ಯೆಗಳಿದ್ದವು. ವಾಸ ಯೋಗ್ಯವಲ್ಲದ ರೀತಿಯ ಜಮೀನುಗಳನ್ನು ಈ ಯೋಜನೆಗೆ ಗುರುತಿಸಲಾಗಿತ್ತು. ತಾವು ಸಚಿವರಾದ ಬಳಿಕ 550 ಎಕರೆ ಜಮೀನನ್ನು ಗುರುತಿಸಿ, ಹಸ್ತಾಂತರ ಮಾಡಲಾಗಿದೆ. 7,000 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. 1,000 ಫಲಾನುಭವಿಗಳಿಗೆ ಏಪ್ರಿಲ್‌ 30ರಂದು ಮನೆಗಳ ಹಂಚಿಕೆ ಆದೇಶ ನೀಡಲಾಗುವುದು ಎಂದರು.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.