ADVERTISEMENT

ಪಾದಯಾತ್ರೆಯಲ್ಲ, ಪಶ್ಚಾತ್ತಾಪದ ಯಾತ್ರೆ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 14:18 IST
Last Updated 10 ಜನವರಿ 2022, 14:18 IST
ಡಾ. ಸಿ.ಎನ್. ಅಶ್ವತ್ಥನಾರಾಯಣ
ಡಾ. ಸಿ.ಎನ್. ಅಶ್ವತ್ಥನಾರಾಯಣ   

ಬೆಂಗಳೂರು: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒಮ್ಮೆಯೂ ಮೇಕೆದಾಟು ಯೋಜನೆ ಕುರಿತು ಸದನದಲ್ಲಿ ಮಾತನಾಡಿಲ್ಲ. ಈಗ ಪ್ರಚಾರಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಇದು ಪಶ್ಚಾತ್ತಾಪದ ಯಾತ್ರೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಟೀಕಿಸಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಜನರು ಸಂಕಷ್ಟ ಅನುಭವಿಸಿದರೂ ಪರವಾಗಿಲ್ಲ, ತಮಗೆ ಪ್ರಚಾರ ಸಿಕ್ಕಬೇಕು ಎಂಬುದು ಶಿವಕುಮಾರ್‌ ದುರುದ್ದೇಶ. ತಮ್ಮನ್ನು ತಾವು ‍ಪ್ರತಿಷ್ಠಾಪಿಸಿಕೊಳ್ಳುವ ಸ್ವಾರ್ಥದಿಂದ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಪಾದಯಾತ್ರೆಯಿಂದ ಕೋವಿಡ್‌ ಹರಡಬಹುದೇ ವಿನಃ ಮೇಕೆದಾಟು ಯೋಜನೆಗೆ ಸಂಬಂಧಿಸಿದ ಸಮಸ್ಯೆ ಪರಿಹಾರವಾಗುವುದಿಲ್ಲ’ ಎಂದರು.

ಏಳು ಬಾರಿ ಶಾಸಕರಾಗಿರುವ ಶಿವಕುಮಾರ್‌ ಅವರಿಗೆ ರಾಮನಗರ ಜಿಲ್ಲೆಯಲ್ಲಿ ಒಂದು ನೀರಾವರಿ ಯೋಜನೆಯನ್ನೂ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಈಗ ಅವರ ಬುಡ ಅಲ್ಲಾಡುತ್ತಿರುವುದರಿಂದ ವ್ಯರ್ಥ ಕಸರತ್ತಿಗೆ ಇಳಿದಿದ್ದಾರೆ. ಆ ಮೂಲಕ ಜನರ ಎದುರು ಬೆತ್ತಲಾಗಿದ್ದಾರೆ ಎಂದು ಹೇಳಿದರು.

ADVERTISEMENT

‘ಪಾದಯಾತ್ರೆಯಿಂದ ಕೋವಿಡ್ ಹೆಚ್ಚಳ’

ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್‌ ನಾಯಕರು ನಡೆಸುತ್ತಿರುವ ಪಾದಯಾತ್ರೆಯಿಂದ ರಾಜ್ಯದಲ್ಲಿ ಕೋವಿಡ್‌ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

‘ಕಾಂಗ್ರೆಸ್‌ ರಾಜ್ಯದ ಮೂಲೆ ಮೂಲೆಗಳಿಂದ ಜನರನ್ನು ಕರೆಸಿಕೊಂಡು ಪಾದಯಾತ್ರೆ ನಡೆಸುತ್ತಿದೆ. ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನೂ ಪಾಲಿಸುತ್ತಿಲ್ಲ. ಇದರಿಂದ ಕೋವಿಡ್‌ ಹೆಚ್ಚಾಗಲಿದೆ. ಕೆಲವೇ ದಿನಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 50,000 ದಾಟಲಿದೆ’ ಎಂದರು.

ರಾಜ್ಯದ ಹಿತ ಕಾಯುವುದು ಆಡಳಿತ ಮತ್ತು ವಿರೋಧ ಪಕ್ಷಗಳ ಜವಾಬ್ದಾರಿ. ಆದರೆ, ಜನರ ಆರೋಗ್ಯದ ಹಿತವನ್ನು ಕಾಂಗ್ರೆಸ್‌ ಬಲಿ ಕೊಡುತ್ತಿದೆ. ಈ ಸಂಬಂಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ. ಸರ್ಕಾರ ಜನರಿಗೊಂದು ಕಾನೂನು ಮತ್ತು ರಾಜಕಾರಣಿಗಳಿಗೆ ಒಂದು ಕಾನೂನು ಎಂಬ ನೀತಿ ಪಾಲಿಸುವುದಿಲ್ಲ ಎಂದು ಹೇಳಿದರು.

‘ಕೋವಿಡ್‌ ವ್ಯಾಪಿಸಿದರೆ ಕಾಂಗ್ರೆಸ್‌ ಹೊಣೆ’

ಬೆಂಗಳೂರು: ಕಾಂಗ್ರೆಸ್‌ ಪಕ್ಷ ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಪಾಲಿಸದೇ ಸರ್ಕಾರದ ಜತೆ ಸಂಘರ್ಷದಿಂದ ಪಾದಯಾತ್ರೆ ನಡೆಸುತ್ತಿದೆ. ಇದರಿಂದ ಕೋವಿಡ್‌ ಉಲ್ಬಣಿಸಿದರೆ ಕಾಂಗ್ರೆಸ್‌ ಪಕ್ಷವೇ ಹೊಣೆ ಹೊರಬೇಕು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

‘ಕೋವಿಡ್‌ ನಿಯಂತ್ರಣ ಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ನಾಯಕರು ವೈಭವೋಪೇತ ಪಾದಯಾತ್ರೆ ನಡೆಸುತ್ತಾ ಅಮಾಯಕ ಜನರ ಆರೋಗ್ಯವನ್ನು ಅಪಾಯಕ್ಕೆ ಒಡ್ಡಿರುವುದು ಆತಂಕಕಾರಿ’ ಎಂದರು.

ಅಧಿಕಾರದಲ್ಲಿ ಇದ್ದಾಗ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಯಾವ ಕೆಲಸವನ್ನೂ ಮಾಡದ ಕಾಂಗ್ರೆಸ್‌ ನಾಯಕರು ಈಗ ಪಾದಯಾತ್ರೆ ಮೂಲಕ ಮತ್ತಷ್ಟು ಬಿಕ್ಕಟ್ಟು ಸೃಷ್ಟಿಗೆ ಯತ್ನಿಸುತ್ತಿದ್ದಾರೆ. ಇದರಿಂದ ರಾಜ್ಯದ ಹಿತಕ್ಕೆ ಸಂಚಕಾರ ತಂದಂತೆ ಆಗುವುದಿಲ್ಲವೆ ಎಂದು ಪ್ರಶ್ನಿಸಿದರು.

ಕೋವಿಡ್‌ ಮಾರ್ಗಸೂಚಿ ಪಾಲಿಸುವುದಾಗಿ ಕಾಂಗ್ರೆಸ್‌ ನಾಯಕರು ಮೊದಲು ಹೇಳಿಕೆ ನೀಡಿದ್ದರು. ಈಗ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.