
ಸಾಕೇತ್ ಶ್ರೀನಿವಾಸಯ್ಯ
(ಚಿತ್ರ–@Cloudwatch199)
ನವದೆಹಲಿ: ಅಮೆರಿಕದ ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿ ಕಾಣೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಮೃತದೇಹ ಪತ್ತೆಯಾಗಿದೆ ಎಂದು ಭಾರತದ ಕಾನ್ಸುಲೇಟ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಭಾರತದ ಕಾನ್ಸುಲೇಟ್ ಜನರಲ್ ಪ್ರಕಟಣೆ ಹೊರಡಿಸಿ, ಸ್ಥಳೀಯ ಪೊಲೀಸರು ಸಾಕೇತ್ ಮೃತದೇಹವನ್ನು ಪತ್ತೆ ಹಚ್ಚಿರುವುದಾಗಿ ದೃಢಪಡಿಸಿದ್ದಾರೆ. ಈ ವಿಷಯ ತಿಳಿಸಲು ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಸಾಕೇತ್ ಶ್ರೀನಿವಾಸಯ್ಯ ಕುಟಂಬಕ್ಕೆ ಕಾನ್ಸುಲೇಟ್ ಜನರಲ್ ಸಂತಾಪ ಸೂಚಿಸಿದೆ.
ಸಾಕೇತ್ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಕಾನ್ಸುಲೇಟ್ ಸಿದ್ಧವಾಗಿದೆ. ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಮೃತದೇಹವನ್ನು ಶೀಘ್ರದಲ್ಲೇ ಭಾರತಕ್ಕೆ ರವಾನಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ನಮ್ಮ ಅಧಿಕಾರಿಗಳು ಕುಟುಂಬದವರೊಂದಿಗೆ ನೇರ ಸಂಪರ್ಕದಲ್ಲಿದ್ದು, ಅಗತ್ಯವಿರುವ ಎಲ್ಲಾ ನೆರವು ನೀಡಲಿದೆ ಎಂದು ತಿಳಿಸಿದೆ.
22 ವರ್ಷದ ಸಾಕೇತ್ ಫೆ. 9ರ ಬೆಳಿಗ್ಗಿನಿಂದ ಕಾಣೆಯಾಗಿದ್ದರು. ಅವರು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ವ್ಯಾಸಂಗ ಮಾಡುತ್ತಿದ್ದರು.
ನಾಪತ್ತೆ ಆಗಿರುವ ಬಗ್ಗೆ ಬರ್ಕ್ಲಿ ಪೊಲೀಸ್ ಇಲಾಖೆಯಲ್ಲಿ ದೂರು ದಾಖಲಾಗಿತ್ತು. ಕಳೆದ ಆರು ದಿನಗಳಿಂದ ಪೊಲೀಸರು ಸಾಕೇತ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಬರ್ಕ್ಲಿ ಬೆಟ್ಟಗಳ ತಪ್ಪಲಿನಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.