ADVERTISEMENT

‘ಏಯ್ ರೌಡಿಸಂ ಮಾಡಕ್ಕೆ ಬಂದಿದ್ದಿಯಾ’: ಶಾಸಕ ಡಿ.ಸಿ.ಗೌರಿಶಂಕರ್ ಪ್ರಶ್ನೆ

ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 12:39 IST
Last Updated 14 ಜೂನ್ 2020, 12:39 IST
ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಲಕ್ಷ್ಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕ ಡಿ.ಸಿ. ಗೌರಿಶಂಕರ್
ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಲಕ್ಷ್ಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕ ಡಿ.ಸಿ. ಗೌರಿಶಂಕರ್   

ತುಮಕೂರು: ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ಅವರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಲಕ್ಷ್ಮಯ್ಯ ಅವರಿಗೆ ಏಕ ವಚನದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಹೊನ್ನೇನಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿತ್ತು. ಈ ವೇಳೆ ಜೆಡಿಎಸ್‌ ಕಾರ್ಯಕರ್ತನಿಗೆ ಗಂಭೀರ ಗಾಯವಾಗಿತ್ತು. ಶನಿವಾರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಮನೆಗೆ ಬಂದ ವೇಳೆ ಕುಟುಂಬಸ್ಥರು, ಸ್ಥಳೀಯರು ಸಬ್‌ ಇನ್‌ಸ್ಪೆಕ್ಟರ್ ವಿರುದ್ಧ ದೂರಿನ ಸುರಿಮಳೆಗೈದರು. ದೂರು ನೀಡಲು ಹೋದರೆ ಪ್ರಕರಣವೇ ದಾಖಲು ಮಾಡಿಕೊಳ್ಳದೇ ತಮ್ಮೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ದೂರಿದರು.

ಇದರಿಂದ ಕೆರಳಿದ ಶಾಸಕ ಅಲ್ಲಿಯೇ ಇದ್ದ ಸಬ್‌ ಇನ್‌ಸ್ಪೆಕ್ಟರ್‌ ಲಕ್ಷ್ಮಯ್ಯ ಅವರನ್ನು ಕರೆದು, ‘ಏಯ್‌ ನೀನೇನು ಇನ್‌ಸ್ಪೆಕ್ಟರ್‌ ಕೆಲಸ ಮಾಡಕ್ಕೆ ಬಂದಿದ್ದಿಯಾ ಇಲ್ಲ ರೌಡಿಸಂ ಮಾಡಕ್ಕೆ ಬಂದಿದ್ದಿಯಾ, ಮಹಿಳೆಯರು, ರೈತರ ಜತೆ ಹೇಗೆ ಮಾತನಾಡಬೇಕು ಎಂಬುದು ಗೊತ್ತಿಲ್ಲವಾ, ನಿನಗೆ ಮಾನ, ಮರ್ಯಾದೆ ಇಲ್ಲವ, ಬುದ್ಧಿ ಇಲ್ಲವ, ನೀನು ಪೊಲೀಸ್ ಇಲಾಖೆಯನ್ನು ರೌಡಿಸಂ ಇಲಾಖೆ ಅನ್ಕೊಂಡಿದ್ದಿಯ, ಅನ್ನ ತಿಂತಿಯಾ ಏನ್ ತಿಂತಿಯಾ.....’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಾನೆ ಎಂದರೆ ಆ ಸಬ್‌ ಇನ್‌ಸ್ಪೆಕ್ಟರ್‌ಗೆ ಅಕ್ಕ, ತಂಗಿ, ಹೆಂಡತಿ ಮಕ್ಕಳು ಇದ್ದಾರಾ ಎನ್ನುವ ಅನುಮಾನ ಕಾಡುತ್ತಿದೆ. ಅಧಿಕಾರಿಯೇ ಈ ರೀತಿ ನಡೆದುಕೊಂಡರೆ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಯಾರು ಎಂದು ಶಾಸಕರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.