ADVERTISEMENT

ಶಾಸಕರು ದೂರು ಕೊಟ್ಟಿಲ್ಲ. ಸಿಎಲ್‌ಪಿ ಸಭೆ ಕರೆಯಿರಿ ಎಂದಿದ್ದಾರೆ: CM ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 9:07 IST
Last Updated 25 ಜುಲೈ 2023, 9:07 IST
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ   

ಬೆಂಗಳೂರು: ಸಚಿವರ ನಡೆಯ ವಿರುದ್ಧ ಅಸಮಾಧಾನಗೊಂಡಿರುವ ಕೆಲವು ಕಾಂಗ್ರೆಸ್‌ ಶಾಸಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿರುವ ಬೆನ್ನಲ್ಲೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ದೂರು ಕೊಟ್ಟಿಲ್ಲ. ಶಾಸಕಾಂಗ ಸಭೆ ಕರೆಯಿರಿ ಎಂದಿದ್ದಾರೆ’ ಎಂದು ಹೇಳಿದ್ದಾರೆ.

ಇದೇ 27ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ಸಚಿವರ ವಿರುದ್ಧ ಆಕ್ರೋಶ ಹೊರಹಾಕಲು ಕಾಂಗ್ರೆಸ್‌ ಶಾಸಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಸಚಿವರ ನಡೆಯಿಂದ ಅಸಮಾಧಾನಗೊಂಡಿರುವ 20ಕ್ಕೂ ಹೆಚ್ಚು ಶಾಸಕರು ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ. ಅಲ್ಲದೇ ಶಾಸಕಾಂಗ ಸಭೆ ಕರೆಯುವಂತೆ ಆಗ್ರಹಿಸಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

ಈ ಬೆಳವಣಿಗೆಗಳ ಬಗ್ಗೆ ಹುಬ್ಬಳ್ಳಿಯಲ್ಲಿ ಮಂಗಳವಾರ ಮಾತನಾಡಿದ ಸಿದ್ದರಾಮಯ್ಯ, ‘ಗುರುವಾರ (ಜುಲೈ 27) ಶಾಸಕಾಂಗ ಸಭೆ ಕರೆಯಲಾಗಿದೆ. ಕಳೆದ ವಾರ ಶಾಸಕಾಂಗ ಸಭೆ ನಡೆಯಬೇಕಿತ್ತು. ರಾಹುಲ್ ಗಾಂಧಿ ಬರುತ್ತಿದ್ದ ಕಾರಣ ಶಾಸಕಾಂಗ ಸಭೆ ಕರೆದಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.

ಇತ್ತ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಎಲ್ಲಾ ಊಹಾಪೋಹ. ಯಾವುದೇ ಪತ್ರ ಬರೆದಿಲ್ಲ. ಶಾಸಕರು ಅವರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಮ್ಮನೆ ಊಹಾಪೋಹದ ಸುದ್ದಿ ಹಬ್ಬಿಸಲಾಗಿದೆ’ ಎಂದಿದ್ದಾರೆ.

‘ಎಲ್ಲ ಸಚಿವರುಗಳು ಶಾಸಕರ ಮಾತು ಕೇಳುತ್ತಿದ್ದಾರೆ. ಎಲ್ಲರೂ ಅವರವರ ಕೆಲಸ ಮಾಡುತ್ತಿದ್ದಾರೆ. ಯಾವುದೇ ಅಸಮಾಧಾನ ಇಲ್ಲ. ವರ್ಗಾವಣೆ ಅವಧಿ ಮುಗಿದಿದೆ’ ಎಂದೂ ಹೇಳಿದರು.

ಸಚಿವರು ಮತ್ತು ಕಾಂಗ್ರೆಸ್‌ ಶಾಸಕರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದ್ದು, ಸಚಿವರ ದುರಹಂಕಾರಕ್ಕೆ ಬುದ್ಧಿ ಹೇಳಿ ಎಂದು ಕೆಲವು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಕೂಡಲೇ ಶಾಸಕಾಂಗ ಸಭೆ ಕರೆಯಬೇಕು ಎಂದು ಹಿರಿಯ ಶಾಸಕರು ಆಗ್ರಹಿಸಿದ್ದಾರೆ ಎಂದೂ ಗೊತ್ತಾಗಿದೆ.

‘ವರ್ಗಾವಣೆ ದಂಧೆಯಲ್ಲಿ ಸಚಿವರು ಮುಳುಗಿದ್ದಾರೆ ಎಂದು ಈ ಹಿಂದಿನ ಶಾಸಕಾಂಗ ಸಭೆಯಲ್ಲೇ ಶಾಸಕರು ಬೇಸರ ಹೊರಹಾಕಿದ್ದರು. ಸಚಿವರ ವರ್ತನೆ ಬದಲಾಗದ ಹಿನ್ನೆಲೆಯಲ್ಲಿ ನೇರವಾಗಿ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ. ಬಸವರಾಜ ರಾಯರಡ್ಡಿ ನೇತೃತ್ವದಲ್ಲಿ ಪತ್ರ ಬರೆದು ಶಾಸಕಾಂಗ ಸಭೆಗೆ ಆಗ್ರಹಿಸಲಾಗಿದೆ. 20ಕ್ಕೂ ಹೆಚ್ಚು ಹಿರಿಯ ಶಾಸಕರು ಈ ಪತ್ರಕ್ಕೆ ಸಹಿ ಹಾಕಿ ಮುಖ್ಯಮಂತ್ರಿಗೆ ರವಾನಿಸಿದ್ದಾರೆ ಎಂದೂ ಹೇಳಲಾಗಿದೆ.

ಇದನ್ನು ಓದಿ: ಸಚಿವರ ಮೇಲೆ ಶಾಸಕರ ಅತೃಪ್ತಿ: ಸಿಎಲ್‌ಪಿ ಸಭೆಯಲ್ಲಿ ಪ್ರಸ್ತಾಪಿಸಲು ಸಿದ್ಧತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.