ADVERTISEMENT

ಪಿಡಿಒ ವರ್ಗಾವಣೆ: ಕೌನ್ಸೆಲಿಂಗ್‌ಗೆ ಶಾಸಕರ ವಿರೋಧ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 0:00 IST
Last Updated 13 ಮಾರ್ಚ್ 2025, 0:00 IST
ಕರ್ನಾಟಕ ವಿಧಾನಸಭೆ (ಪ್ರಾತಿನಿಧಿಕ ಚಿತ್ರ)
ಕರ್ನಾಟಕ ವಿಧಾನಸಭೆ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ‘ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವರ್ಗಾವಣೆಗೆ ಕೌನ್ಸೆಲಿಂಗ್‌ ಬೇಡವೇ ಬೇಡ. ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡಿದರೆ ನಮ್ಮ ಪತ್ರಕ್ಕೆ ಬೆಲೆಯೇ ಇರುವುದಿಲ್ಲ. ಅಧಿಕಾರಿಗಳ ಮೇಲೆ ಜನಪ್ರತಿನಿಧಿಗಳಿಗೆ ಹಿಡಿತವೂ ಇರುವುದಿಲ್ಲ...’

ಕೌನ್ಸೆಲಿಂಗ್‌ ಮೂಲಕ ಪಿಡಿಒಗಳನ್ನು ವರ್ಗಾವಣೆ ಮಾಡುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರ ನಿರ್ಧಾರವನ್ನು ವಿಧಾನಸಭೆಯಲ್ಲಿ ಶಾಸಕರು ಬುಧವಾರ ಹೀಗೆ ವಿರೋಧಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಡಾ.ಎಚ್‌.ಡಿ. ರಂಗನಾಥ್‌ ಅವರು, ‘ನನ್ನ ಕ್ಷೇತ್ರದಲ್ಲಿ ಪಿಡಿಒಗಳ ಕೊರತೆ ಇದೆ. ಒಬ್ಬ ಪಿಡಿಒ ಎರಡರಿಂದ ಮೂರು ಪಂಚಾಯಿತಿಗಳ ಪ್ರಭಾರ ಹೊಂದಿದ್ದಾರೆ. ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡುತ್ತಿರುವುದರಿಂದಲೂ ತೊಂದರೆ ಆಗಿದೆ’ ಎಂದರು.

ADVERTISEMENT

ಬಿಜೆಪಿಯ ಸುರೇಶ್‌ ಗೌಡ, ಹರೀಶ್‌ ಪೂಂಜ, ಸಿ.ಸಿ. ಪಾಟೀಲ, ಜೆಡಿಎಸ್‌ನ ಸಿ.ಬಿ. ಸುರೇಶ್‌ ಬಾಬು, ಕಾಂಗ್ರೆಸ್‌ನ ಎಚ್‌.ಡಿ. ತಮ್ಮಯ್ಯ ಸೇರಿದಂತೆ ಹಲವರು ದನಿಗೂಡಿಸಿದರು.

ಉತ್ತರ ನೀಡಿದ ಪ್ರಿಯಾಂಕ್‌ ಖರ್ಗೆ, ‘300ರಿಂದ 400 ಪಿಡಿಒಗಳು ಹತ್ತು ವರ್ಷಕ್ಕೂ ಹೆಚ್ಚು ಅವಧಿಯಿಂದ ಒಂದೇ ಸ್ಥಳದಲ್ಲಿದ್ದಾರೆ. 400ರಿಂದ 500 ಪಿಡಿಒಗಳು ಎಂಟು ವರ್ಷಕ್ಕೂ ಹೆಚ್ಚು ಅವಧಿಯಿಂದ ಹಾಗೂ ಶೇಕಡ 70ರಷ್ಟು ಮಂದಿ ಐದು ವರ್ಷಕ್ಕೂ ಹೆಚ್ಚು ಸಮಯದಿಂದ ಒಂದೇ ಸ್ಥಳದಲ್ಲಿದ್ದಾರೆ. ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡಿದರೆ ಮಾತ್ರ ಅವರನ್ನು ಕದಲಿಸಲು ಸಾಧ್ಯ’ ಎಂದರು.

ಇದು ಆರಂಭದ ಹಂತ. ಕೌನ್ಸೆಲಿಂಗ್‌ನಲ್ಲಿ ಸಮಸ್ಯೆಗಳಿದ್ದರೆ ಸರಿಪಡಿಸಲಾ್ಗುವುದು ಎಂದು ಹೇಳಿದರು.

868 ಪಿಡಿಒ ಹುದ್ದೆಗಳು ಖಾಲಿ ಇವೆ. 247 ಪಿಡಿಒಗಳ ಹುದ್ದೆಗಳ ಭರ್ತಿಗೆ ಪರೀಕ್ಷೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ನೇಮಕಾತಿ ಆದೇಶ ಹೊರಡಿಸಲಾಗುವುದು. ಉಳಿದ ಹುದ್ದೆಗಳ ಭರ್ತಿಗೂ ಆರ್ಥಿಕ ಇಲಾಖೆಯ ಸಮ್ಮತಿ ದೊರೆತಿದೆ. ಶಾಸಕರು ಮತ್ತು ಸಚಿವರ ಬಳಿ 88 ಪಿಡಿಒಗಳು ಕಾರ್ಯನಿರ್ವಹಿಸುತ್ತಿದ್ದು, ಅವರ ಸೇವೆಯನ್ನು ಇಲಾಖೆಗೆ ಮರಳಿಸಬೇಕು ಎಂದು ಸಚಿವರು ಮನವಿ ಮಾಡಿದರು.

‘ಗೃಹಲಕ್ಷ್ಮಿ: ಎರಡು ತಿಂಗಳ ಹಣ ಬಾಕಿ’

‘ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಪ್ರಸಕ್ತ ವರ್ಷದ ಜನವರಿ ಮತ್ತು ಫೆಬ್ರುವರಿ ತಿಂಗಳ ಹಣ ಬಿಡುಗಡೆ ಬಾಕಿ ಇದೆ. ಶೀಘ್ರದಲ್ಲಿ ಬಾಕಿ ಮೊತ್ತವನ್ನು ಫಲಾನುಭವಿಗಳ ಖಾತೆಗಳಿಗೆ ವರ್ಗಾಯಿಸಲಾಗುವುದು’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಭರವಸೆ ನೀಡಿದರು.

ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಅವರ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಪರವಾಗಿ ಉತ್ತರಿಸಿದ ಅವರು, ‘ಸಂಪನ್ಮೂಲ ಸಂಗ್ರಹವನ್ನು ಆಧರಿಸಿ ಸರ್ಕಾರ ಹಣ ಬಿಡುಗಡೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಖಜಾನೆಯಲ್ಲಿ ಸಮಸ್ಯೆಗಳ ಕಾರಣದಿಂದ ಎರಡು ತಿಂಗಳ ಹಣ ಬಿಡುಗಡೆ ಆಗಿಲ್ಲ’ ಎಂದರು.

ವಿತ್ತೀಯ ಬೇಡಿಕೆ ಮಂಡನೆ

ರಾಜ್ಯ ಸರ್ಕಾರದ 28 ಇಲಾಖೆಗಳಿಗೆ 2025ರ ಏಪ್ರಿಲ್‌ 1ರಿಂದ 2026 ಮಾರ್ಚ್‌ 31ರವರೆಗೆ ಅಗತ್ಯವಿರುವ ಮೊತ್ತವನ್ನು ವೆಚ್ಚ ಮಾಡಲು ಮಂಜೂರಾತಿ ಕೋರುವ ವಿತ್ತೀಯ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಬುಧವಾರ ಮಂಡಿಸಿದರು.

ಬಜೆಟ್‌ ಘೋಷಣೆಯಂತೆ ವೃತ್ತಿ ತೆರಿಗೆ ದರದ ಪರಿಷ್ಕರಣೆಗೆ ಅವಕಾಶ ಕಲ್ಪಿಸುವ ‘ಕರ್ನಾಟಕ ವೃತ್ತಿಗಳ, ಕಸುಬುಗಳ, ಆಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ (ತಿದ್ದುಪಡಿ) ವಿಧೇಯಕ–2025’ ಅನ್ನು ಕೂಡ ಮುಖ್ಯಮಂತ್ರಿಯವರು ಸದನದಲ್ಲಿ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.