ADVERTISEMENT

ವಿಧಾನ ಪರಿಷತ್ ಚುನಾವಣೆ: ಎರಡು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 16:46 IST
Last Updated 26 ಜನವರಿ 2022, 16:46 IST
ಮಧು ಮಾದೇಗೌಡ ಹಾಗೂ ಬಸವರಾಜ ಗುರಿಕಾರ
ಮಧು ಮಾದೇಗೌಡ ಹಾಗೂ ಬಸವರಾಜ ಗುರಿಕಾರ   

ನವದೆಹಲಿ: ರಾಜ್ಯ‌ ವಿಧಾನ ಪರಿಷತ್ ನ ದಕ್ಷಿಣ ಪದವೀಧರ ಕ್ಷೇತ್ರ ಹಾಗೂ ಪಶ್ಚಿಮ ಶಿಕ್ಷಕರ‌ ಕ್ಷೇತ್ರದ ಚುನಾವಣೆಯ ತನ್ನ ಅಭ್ಯರ್ಥಿಗಳನ್ನು ಕಾಂಗ್ರೆಸ್ ಬುಧವಾರ‌ ಪ್ರಕಟಿಸಿದೆ.

ಜಿ.ಮಾದೇಗೌಡ ಅವರ ಪುತ್ರ ಮದ್ದೂರಿನ ಮಧು ಮಾದೇಗೌಡ ಅವರಿಗೆ ದಕ್ಷಿಣ ಪದವೀಧರ ಕ್ಷೇತ್ರದಿಂದ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಸವರಾಜ ಗುರಿಕಾರ ಅವರಿಗೆ ಟಿಕೆಟ್‌ ನೀಡಿ ಆದೇಶ ಹೊರಡಿಸಲಾಗಿದೆ.

ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ರಾಷ್ಟ್ರೀಯ ಸಂಘದ ಉಪಾಧ್ಯಕ್ಷರಾಗಿರುವ‌ ಗುರಿಕಾರ ಅವರು ಇತ್ತೀಚೆಗೆ ನಡೆದಿದ್ದ ಪಶ್ಚಿಮ ಪದವೀಧರ‌ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.

ADVERTISEMENT

ಪಕ್ಷದಿಂದ ಸ್ಪರ್ಧಿಸಿದ್ದ ತನ್ನ ಅಭ್ಯರ್ಥಿಯನ್ನು ಕೊನೆಯ ಕ್ಷಣದಲ್ಲಿ ಕಣದಿಂದ ನಿವೃತ್ತಗೊಳಿಸಿದ್ದ ಜೆಡಿಎಸ್, ಗುರಿಕಾರ ಅವರನ್ನು ಬೆಂಬಲಿಸಿತ್ತು.

ವಿಧಾನ ಪರಿಷತ್ ನ ಈ ಎರಡೂ ಸ್ಥಾನಗಳು 2022ರ ಜುಲೈ 4ರಂದು ಖಾಲಿ ಆಗಲಿದೆ. ಅದಕ್ಕಿಂತ ಮೊದಲು ಜೂನ್ ಮೊದಲ ಅಥವಾ ಎರಡನೇ ವಾರ ಚುನಾವಣೆ ನಡೆಯಲಿದೆ.

ಪ್ರಸ್ತುತದಕ್ಷಿಣ ಪದವೀಧರ ಕ್ಷೇತ್ರವನ್ನು ಜೆಡಿಎಸ್‌ನಿಂದ ಕೆ.ಟಿ ಶ್ರೀಕಂಠೇಗೌಡ ಅವರು ಪ್ರತಿನಿಧಿಸಿದ್ದಾರೆ. ಪಶ್ಚಿಮ ಶಿಕ್ಷಕರ ಕ್ಷೇತ್ರವನ್ನು ಸಭಾಪತಿಯೂ ಆಗಿರುವ ಜೆಡಿಎಸ್‌ನ ಬಸವರಾಜ ಹೊರಟ್ಟಿ ಪ್ರತಿನಿಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.