ADVERTISEMENT

ಮೋದಿ-ಟ್ರಂಪ್ ಜತೆಗೆ ಸೆಲ್ಫಿ ಕ್ಲಿಕ್ಕಿಸಿದ ಸಿದ್ದಾಪುರದ ಹುಡುಗನೀಗ ವರ್ಲ್ಡ್ ಫೇಮಸ್

ಅಖಿಲ್ ಕಡಿದಾಳ್
Published 26 ಸೆಪ್ಟೆಂಬರ್ 2019, 6:39 IST
Last Updated 26 ಸೆಪ್ಟೆಂಬರ್ 2019, 6:39 IST
   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಮೂಲದ 13 ವರ್ಷದ ಸಾತ್ವಿಕ್ ಹೆಗಡೆ ಈಗ ವಿಶ್ವವಿಖ್ಯಾತ. ಹ್ಯೂಸ್ಟನ್‌ನಲ್ಲಿ ಭಾನುವಾರ ನಡೆದ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಸಾತ್ವಿಕ್ ಇಬ್ಬರು ವಿಶ್ವ ನಾಯಕರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಲು ಯಶಸ್ವಿಯಾದ.

'ಅದೇನು ಅಷ್ಟು ದೊಡ್ಡ ವಿಷಯವಲ್ಲ ಬಿಡಿ. ನನ್ನ ಪಾಲಿಗೆ ಅದು ಹತ್ತರಲ್ಲಿ ಹನ್ನೊಂದನೇ ಸೆಲ್ಫಿ ಅಷ್ಟೇ' ಎಂದು ದೊಡ್ಡವರಂತೆ ಮಾತನಾಡಿದರೂ, ಸಾತ್ವಿಕ್ ಮಾತಿನ ಒಳಗೊಳಗೆ ಪುಳಕಿತ ಭಾವ ತುಳುಕುತ್ತದೆ.

'ಇದು ಮತ್ತೊಂದು ಸೆಲ್ಫಿ ಅಷ್ಟೇ. ಇಂಥದ್ದೊಂದು ಸೆಲ್ಫಿ ಸಿಗಲು ಅದೃಷ್ಟ ಬೇಕು. ನನ್ನ ವಿನಂತಿ ಮನ್ನಿಸಿದ ಟ್ರಂಪ್ ಮತ್ತು ಮೋದಿ ಅವರಿಗೆ ನಾನು ಋಣಿ' ಎನ್ನುವುದು ಸಾತ್ವಿಕ್‌ನ ಖುಷಿಖುಷಿ ಮಾತು. 'ಅಮೆರಿಕ ಗುಪ್ತಚರ ಇಲಾಖೆಯ ಅಧಿಕಾರಿಗಳು ನಾನು ಮೊಬೈಲ್ ಫೋನ್ ತೆಗೆಯಲು ಅಡ್ಡಿಪಡಿಸಿದರು. ಅವರೊಂದಿಗೆ ತುಸು ಏರಿದ ದನಿಯ ಮಾತುಕತೆ ನಡೆಯಿತು' ಎಂದು ನೆನಪಿಸಿಕೊಳ್ಳುತ್ತಾನೆ 13ರ ಈ ಪೋರ.

ADVERTISEMENT
ತಾಯಿ ಮಧು ಹೆಗಡೆ, ತಂದೆಪ್ರಭಾಕರ ಹೆಗಡೆ ಜತೆಗೆ ಬಾಲಕ ಸಾತ್ವಿಕ್ ಹೆಗಡೆ

ಸಾತ್ವಿಕ್ ಸೆಲ್ಫಿ ತಗೊಂಡ ಕ್ಷಣದ ವಿಡಿಯೊಗಳು ಈಗ ವಿಶ್ವವ್ಯಾಪಿ ಹರಿದಾಡಿದೆ. ಹ್ಯೂಸ್ಟನ್ ಕ್ರೀಡಾಂಗಣದಲ್ಲಿ ಟ್ರಂಪ್-ಮೋದಿ ಜೊತೆಗೆ ಹೆಜ್ಜೆಹಾಕಿ ಒಂದು ಸುತ್ತು ಬಂದಿದ್ದರು. ಭಾರತದ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸುವ ಕಲಾವಿದರು, ಅಚ್ಚ ಬಿಳಿ ಬಟ್ಟೆ ತೊಟ್ಟಿದ್ದ ಯೋಗಾಭ್ಯಾಸಿಗಳು ಅಲ್ಲಿದ್ದರು. ಜನರ ಗುಂಪಿನಲ್ಲಿದ್ದ ಸಾತ್ವಿಕ್ ಹೆಗಡೆ ತುಸು ಮುಂದೆ ಬಂದು ಟ್ರಂಪ್ ಅವರನ್ನು ಕೂಗಿ ಕರೆದು, 'ನಿಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಬಹುದೆ?' ಎಂದು ವಿನಂತಿ ಮಾಡಿದ.

ಟ್ರಂಪ್ ಬಳಿಗೆ ಸಾತ್ವಿಕ್ ಬರುವ ಹೊತ್ತಿಗೆ ಮೋದಿ ಒಂದಿಷ್ಟು ಹೆಜ್ಜೆ ಮುಂದೆ ಸಾಗಿದ್ದರು. ಸಾತ್ವಿಕ್ ದನಿ ಕೇಳಿಸಿದ ತಕ್ಷಣ ಹಿಂದಡಿಯಿಟ್ಟರು. ಎರಡೂ ದೇಶಗಳ ನಾಯಕರು ಅಪರೂಪದ ಸೆಲ್ಫಿಗಾಗಿ 13ರ ಪೋರನೊಂದಿಗೆ ಪೋಸುಕೊಟ್ಟರು.

ಸಾತ್ವಿಕ್ ಬೆನ್ನು ತಟ್ಟಿದ ಮೋದಿ, 'ಮೋಡಿ ಮಾಡಿದೆ ನೀನು' (ಕಮಾಲ್ ಕರ್ದಿಯಾ) ಎಂದರು. ಟ್ರಂಪ್ ಮಾತ್ರ, 'ನಿನಗೆ ಏನು ಬೇಕು ಎನ್ನುವ ಸ್ಪಷ್ಟತೆ ನಿನಗಿದೆ. ಜೀವನದಲ್ಲಿ ಯಶಸ್ವಿ ವ್ಯಕ್ತಿ ಆಗ್ತೀಯಾ' (you're going to be a successful person, because you know what you want) ಎಂದು ಅಭಿನಂದಿಸಿದರು ಎನ್ನುತ್ತಾರೆ ಸಾತ್ವಿಕ್‌ನ ತಂದೆ ಪ್ರಭಾಕರ.

ಐಟಿ ವೃತ್ತಿಯಲ್ಲಿರುವ ಪ್ರಭಾಕರ ಅವರು ಹತ್ತು ವರ್ಷಗಳ ಹಿಂದೆ ಅಮೆರಿಕಕ್ಕೆ ವಲಸೆ ಹೋದವರು. ಪ್ರಸ್ತುತ ಅವರು ಟೆಕ್ಸಾಸ್‌ನ ಸೇಂಟ್ ಆಂಟೊನಿಯೊ ನಿವಾಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.