
ಬೆಂಗಳೂರು: ಉದ್ಯಮಿ ಮೋಹನ್‌ದಾಸ್ ಪೈ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಮರ ನಡೆದಿದೆ.
‘ಬಸ್‌ಗಳ ಕೊರತೆ ಬಹಳಷ್ಟಿದೆ. ದಯವಿಟ್ಟು ಖಾಸಗಿ ಬಸ್‌ಗಳಿಗೆ ಅವಕಾಶ ನೀಡಿ’ ಎಂದು ಮೋಹನ್‌ದಾಸ್ ಪೈ ‘ಎಕ್ಸ್’ ಖಾತೆಯಲ್ಲಿ ತಿಳಿಸಿದ್ದರು. ಅದಕ್ಕೆ ದೀರ್ಘವಾಗಿ ಪ್ರತಿಕ್ರಿಯೆ ನೀಡಿರುವ ರಾಮಲಿಂಗಾರೆಡ್ಡಿ, ‘ಕರ್ನಾಟಕದಲ್ಲಿ ಅತ್ಯಧಿಕ ಬಸ್‌ಗಳು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿವೆ. ಗುಜರಾತ್ ಸೇರಿದಂತೆ ಬಿಜೆಪಿ ನೇತೃತ್ವದ ಸರ್ಕಾರ ಇರುವ ರಾಜ್ಯಗಳಲ್ಲಿ ಇಂಥ ಸಾರಿಗೆ ವ್ಯವಸ್ಥೆ ಇದ್ದರೆ ತೋರಿಸಿ’ ಎಂದು ಸವಾಲು ಹಾಕಿದ್ದಾರೆ.
ಅಶ್ವಿನ್ ಮಹೇಶ್ ಅವರು ಎಕ್ಸ್ ಖಾತೆಯಲ್ಲಿ ಬಸ್‌ಗಳ ಕೊರತೆ ಬಗ್ಗೆ ಬರೆದುಕೊಂಡಿದ್ದರು. ‘10 ಸಾವಿರಕ್ಕಿಂತ ಅಧಿಕ ಬಸ್‌ಗಳ ಕೊರತೆ ಇದೆ. ಎರಡು ವರ್ಷಗಳಲ್ಲಿ ಇದು 11 ಸಾವಿರಕ್ಕೆ ತಲುಪಿದೆ. ಬಿಎಂಟಿಸಿ ನಾಲ್ಕು ಸಾವಿರ ಬಸ್‌ಗಳನ್ನು ಹೊಸ ಯೋಜನೆಯಡಿ ಸೇರ್ಪಡೆ ಮಾಡಿದರೂ ಅರ್ಧದಷ್ಟೂ ಕೊರತೆ ನೀಗುವುದಿಲ್ಲ. ಅಲ್ಲದೇ, ಹಿಂದಿನ ಕ್ರಮಗಳನ್ನು ನೋಡಿದರೆ ಎರಡು ವರ್ಷಗಳಲ್ಲಿ ನಾಲ್ಕು ಸಾವಿರ ಬಸ್‌ಗಳು ಸೇರ್ಪಡೆಯಾಗಲಿವೆ ಎಂದು ಭಾವಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದರು.
ಇದನ್ನು ಉಲ್ಲೇಖಿಸಿ ಮೋಹನ್‌ದಾಸ್ ಫೈ ಅವರು ರಾಮಲಿಂಗಾರೆಡ್ಡಿ ಅವರಿಗೆ ಟ್ಯಾಗ್ ಮಾಡಿ ಪ್ರತಿಕ್ರಿಯಿಸಿದ್ದರು. ‘ಕಳೆದ ಮೂರು ವರ್ಷಗಳಿಂದ ಬಸ್‌ಗಳ ಕೊರತೆ ಮತ್ತು ಸಾರ್ವಜನಿಕ ಸಾರಿಗೆಯ ಕೊರತೆ ಇದೆ. (ಇದಕ್ಕೂ ಮೊದಲು) ದಯವಿಟ್ಟು ಖಾಸಗಿ ಬಸ್‌ಗಳು ಸೇವೆಯನ್ನು ಒದಗಿಸಲು ಅನುಮತಿ ನೀಡಬೇಕು. ಸಚಿವರಾಗಿ ನೀವು ಪಿಎಸ್‌ಯು (ಸಾರ್ವಜನಿಕ ವಲಯದ ಉದ್ಯಮ) ಮಾತ್ರ ಕೆಲಸ ಮಾಡುತ್ತದೆ ಎಂಬ ಮೌಢ್ಯಭಾವವನ್ನು ಹೊಂದಿದ್ದೀರಿ. ಸಾರ್ವಜನಿಕ ಸಾರಿಗೆ ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದೀರಿ. ಯಾರು ಒದಗಿಸಿದರೂ ಜನರಿಗೆ ಸಾರ್ವಜನಿಕ ಸಾರಿಗೆಯ ಅಗತ್ಯವಿದೆ’ ಎಂದು ತಿಳಿಸಿದ್ದರು.
ಅದಕ್ಕೆ ಉತ್ತರ ನೀಡಿರುವ ಸಚಿವರು, ‘ನಿಮ್ಮೊಂದಿಗೆ ಮುಖಾಮುಖಿ ಚರ್ಚೆ ಮಾಡಲು ನಮ್ಮ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಸಾಕು. ನೀವು ಸಾಮಾಜಿಕ ಜಾಲತಾಣದಲ್ಲೇ ಇರುತ್ತೀರಾ? ಇಲ್ಲ ಚರ್ಚೆಗೆ ಬರಲು ಸಿದ್ಧರಿದ್ದೀರಾ’ ಎಂದು ಪ್ರಶ್ನಿಸಿದ್ದಾರೆ.
‘ನಿಮ್ಮ ದೃಷ್ಟಿಕೋನ ಕೇವಲ ಪಕ್ಷಪಾತವಲ್ಲ. ಅದು ಮೂಢನಂಬಿಕೆ ಆಗಿದೆ. ಬ್ಯಾಲೆನ್ಸ್‌ಶೀಟ್ ಮೂಲಕ ಸಾರ್ವಜನಿಕ ಸೇವೆಯನ್ನು ನೀವು ನೋಡುತ್ತೀರಿ. ನಾವು 1.5 ಕೋಟಿ ಜನರನ್ನು ನೋಡುತ್ತೇವೆ. ‘ಶಕ್ತಿ’ ಯೋಜನೆ ಮೂಲಕ 650 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇದು ಚಲನಶೀಲ ಮತ್ತು ಆರ್ಥಿಕ ಸಬಲೀಕರಣ’ ಎಂದು ಹೇಳಿದ್ದಾರೆ.
‘ಸಾಮಾಜಿಕ ಸೇವೆಯ ಸಮತೋಲನ ಕಾಯ್ದುಕೊಂಡಿದ್ದೇವೆ. ಗ್ರಾಮೀಣ ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಬಸ್ ಖಚಿತಪಡಿಸಿದ್ದೇವೆ. ಇದರಿಂದ ಶೇ 30ರಷ್ಟು ಮಾರ್ಗಗಳು ನಷ್ಟದಲ್ಲಿ ಇವೆ. ಶೇ 30ರಷ್ಟು ಮಾರ್ಗಗಳು ಲಾಭ–ನಷ್ಟವಿಲ್ಲದೇ ಕಾರ್ಯನಿರ್ವಹಣೆಯಲ್ಲಿವೆ. ಉಳಿದ ಶೇ 40ರಷ್ಟು ಮಾರ್ಗಗಳಲ್ಲಿ ಲಾಭ ಗಳಿಸುತ್ತಿದ್ದೇವೆ. ಶೇ 98ರಷ್ಟು ಹಳ್ಳಿಗಳಿಗೆ ಬಸ್ ಸಂಪರ್ಕ ಕಲ್ಪಿಸಿದ್ದೇವೆ’ ಎಂದು ತಿಳಿಸಿದ್ದಾರೆ.
‘ಬಿಜೆಪಿಯ ಅಧಿಕಾರದ ಅವಧಿಯಲ್ಲಿ ಬಸ್ ಖರೀದಿ, ಸಿಬ್ಬಂದಿ ನೇಮಕಾತಿ ಮಾಡದೇ ನಿಗಮಗಳು ಹಾಳಾಗುವಂತೆ ಮಾಡಿದಾಗ ನೀವು ಒಂದೇ ಒಂದು ಪ್ರಶ್ನೆಯನ್ನು ಎತ್ತಿಲ್ಲ. ಜನಪರ ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದೀರಿ. ರಾಜ್ಯದಲ್ಲಿ 26,054 ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ. 2 ವರ್ಷಗಳಲ್ಲಿ 5,800 ಹೊಸ ಬಸ್‌ಗಳ ಸೇರ್ಪಡೆ ಮಾಡಿದ್ದೇವೆ. 2026ರ ಕೊನೆಯ ವೇಳೆಗೆ 2,000ಕ್ಕೂ ಅಧಿಕ ಬಸ್‌ಗಳು ಸೇರ್ಪಡೆಗೊಳ್ಳಲಿವೆ’ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.