ADVERTISEMENT

ಹಣ ಅಕ್ರಮ ವರ್ಗಾವಣೆ: ಜೆಎಸ್‌ಡಬ್ಲ್ಯು ಸ್ಟೀಲ್‌ ಮೇಲ್ಮನವಿ ವಜಾ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 13:36 IST
Last Updated 8 ಅಕ್ಟೋಬರ್ 2025, 13:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಿಜೆಪಿ ಶಾಸಕ ಜಿ. ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿಯ (ಒಎಂಸಿ) ಅಕ್ರಮ ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್ ಮತ್ತು ಅದರ ಅಧಿಕಾರಿಗಳ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣ ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಜಾರಿ ನಿರ್ದೇಶನಾಲಯದ ದೂರು ಮತ್ತು ವಿಶೇಷ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ಕರ್ನಾಟಕ ಹೈಕೋರ್ಟ್‌ನ 2022ರ ಜೂನ್ 13ರ ಆದೇಶವನ್ನು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ಎತ್ತಿಹಿಡಿದಿದೆ.

ಹಣ ಅಕ್ರಮ ವರ್ಗಾವಣೆ ಕಾಯ್ದೆಯ ಸೆಕ್ಷನ್ 26ರ ಅಡಿಯಲ್ಲಿ ತನ್ನ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ವಿರುದ್ಧ ಕಂಪನಿಯು ಈಗಾಗಲೇ ಮೇಲ್ಮನವಿ ನ್ಯಾಯಮಂಡಳಿಯನ್ನು ಸಂಪರ್ಕಿಸಿದೆ ಎಂದು ಗಮನಿಸಿದ ಪೀಠವು ಮೇಲ್ಮನವಿಯನ್ನು ವಜಾಗೊಳಿಸಿತು.

ADVERTISEMENT

ಜಾರಿ ನಿರ್ದೇಶನಾಲಯವು ದಾಖಲಿಸಿದ ಇಸಿಐಆರ್‌ನಲ್ಲಿ ಕಂಪನಿಯನ್ನು ಆರೋಪಿಯನ್ನಾಗಿ  ಹೆಸರಿಸಿಲ್ಲ ಎಂಬುದನ್ನೂ ನ್ಯಾಯಪೀಠ ಗಮನಿಸಿತು. 

ಕಂಪನಿಯು ವಿಜಯನಗರದಲ್ಲಿರುವ ತನ್ನ ಘಟಕಕ್ಕೆ 1.5 ದಶಲಕ್ಷ ಟನ್ ಕಬ್ಬಿಣದ ಅದಿರು ಪೂರೈಸಲು ಒಎಂಸಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಕಂಪನಿಯು ಒಎಂಸಿಗೆ ₹130 ಕೋಟಿ ಮುಂಗಡ ಪಾವತಿಸಿತ್ತು. 

ಒಎಂಸಿಯು 2009ರ ನವೆಂಬರ್‌ನಿಂದ ಡಿಸೆಂಬರ್ ವರೆಗೆ ತನ್ನ ಗಣಿಗಳಿಂದ, 2010ರ ಮಾರ್ಚ್‌ ವರೆಗೆ ಅನಂತಪುರ ಮೈನಿಂಗ್ ಕಾರ್ಪೊರೇಷನ್ ಮತ್ತು ಇತರ ಕಂಪನಿಗಳಿಂದ ಅದಿರನ್ನು ಭಾಗಶಃ ಸರಬರಾಜು ಮಾಡಿತ್ತು. ಪೂರ್ಣ ಪ್ರಮಾಣದ ಅದಿರು ಸರಬರಾಜು ಮಾಡದ ಕಾರಣಕ್ಕೆ ಉಳಿದ ಮೊತ್ತವನ್ನು ಹೊಂದಾಣಿಕೆ ಮಾಡಿಕೊಳ್ಳಲು ಕಂಪನಿ ಕೋರಿತ್ತು. 

ಏತನ್ಮಧ್ಯೆ, ರೆಡ್ಡಿ ಕಂಪನಿ ವಿರುದ್ಧ ತನಿಖೆಗೆ ನ್ಯಾಯಾಲಯ ಆದೇಶಿಸಿತ್ತು. ಈ ನಿರ್ದೇಶನದ ಅನುಸಾರ ರೆಡ್ಡಿ ಮತ್ತು ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

ಆರಂಭದಲ್ಲಿ ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್ ಅನ್ನು ಆರೋಪಿ ಎಂದು ಹೆಸರಿಸಲಾಗಿತ್ತು. ಆ ಬಳಿಕ ಪ್ರಕರಣದಿಂದ ಕೈಬಿಡಲಾಗಿತ್ತು. 

2012ರಲ್ಲಿ ರೆಡ್ಡಿ ಮತ್ತು ಅರುಣಾ ವಿರುದ್ಧ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ್ದ ಜಾರಿ ನಿರ್ದೇಶನಾಲಯವು 2015ರಲ್ಲಿ ಕಂಪನಿಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಜತೆಗೆ, ಕಂಪನಿ ವಿರುದ್ಧ ‍ಪ್ರಕರಣ ದಾಖಲಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.