ADVERTISEMENT

ಮುಂಗಾರು | ರಾಜ್ಯದಲ್ಲಿ ಈವರೆಗೆ ಶೇ 61ರಷ್ಟು ಬಿತ್ತನೆ: ಎನ್‌. ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2025, 16:02 IST
Last Updated 5 ಜುಲೈ 2025, 16:02 IST
ಚಲುವರಾಯಸ್ವಾಮಿ
ಚಲುವರಾಯಸ್ವಾಮಿ   

ಬೆಂಗಳೂರು: ‘ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಈವರೆಗೆ ಶೇ 61ರಷ್ಟು (50.57 ಹೆಕ್ಟೇರ್‌ ಪ್ರದೇಶ) ಬಿತ್ತನೆಯಾಗಿದ್ದು, ಮುಂಗಾರು ಹಂಗಾಮಿನಲ್ಲಿ 84 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ತಲುಪುವ ವಿಶ್ವಾಸವಿದೆ’ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು,  ‘ಮುಂಗಾರು ಹಂಗಾಮಿನಲ್ಲಿ ಕೆಲವು ಭಾಗಗಳಲ್ಲಿ ಆಗಸ್ಟ್‌ 15ರ ವರೆಗೆ ಬಿತ್ತನೆ ನಡೆಯಲಿದೆ. ಹೀಗಾಗಿ, ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಆಗದಂತೆ ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿದೆ’ ಎಂದರು.

‌‘ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 26.77 ಲಕ್ಷ ಟನ್‌ ರಸಗೊಬ್ಬರ ಬೇಡಿಕೆಯ ನಿರೀಕ್ಷೆ ಇದೆ. ಜುಲೈ 3ರವರೆಗೆ 13.73 ಲಕ್ಷ ಟನ್‌ ರಸಗೊಬ್ಬರ ಮಾರಾಟವಾಗಿದ್ದು, 9 ಲಕ್ಷ ಟನ್‌ ದಾಸ್ತಾನಿದೆ’ ಎಂದರು.

ADVERTISEMENT

‘ಯೂರಿಯಾ ಬಳಕೆ ಪ್ರಮಾಣ ಕಡಿಮೆ ಮಾಡಬೇಕೆಂದು ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ತಕ್ಷಣವೇ ಸಂಪೂರ್ಣ ಬಳಕೆ ತಗ್ಗಿಸಲು ಸಾಧ್ಯವಾಗದ ಕಾರಣ ಹಂತ ಹಂತವಾಗಿ ಬಳಕೆ ಪ್ರಮಾಣ ಕಡಿಮೆ ಮಾಡುವ ಪ್ರಯತ್ನ ನಡೆದಿದೆ’ ಎಂದರು.

‘ಅಡಿಕೆ ಹಾಗೂ ಮೆಕ್ಕೆ ಜೋಳಕ್ಕೆ ಯೂರಿಯಾ ಬಳಕೆ ಹೆಚ್ಚು. ಅಡಿಕೆ, ಮೆಕ್ಕೆಜೋಳ ಬೆಳೆಯುವ ಪ್ರದೇಶ ವಿಸ್ತರಣೆಯಾದಂತೆ ಯೂರಿಯಾ ಬಳಕೆಯೂ ಹೆಚ್ಚುತ್ತಿದೆ. ಇತರ ಬೆಳೆಗಳಿಗೆ ಯೂರಿಯಾ ಬಳಕೆ ಪ್ರಮಾಣ ಕಡಿಮೆಯಾಗಿದೆ. ಈ ವಿಚಾರವನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಒಪ್ಪುತ್ತಿಲ್ಲ. ವಾರ್ಷಿಕವಾಗಿ 11.17 ಲಕ್ಷ ಟನ್‌ ಯೂರಿಯಾಗೆ ಬೇಡಿಕೆಯಿದ್ದು, ಬಹುತೇಕ ಅಷ್ಟೂ ಬಳಕೆಯಾಗುತ್ತಿದೆ. ಆದರೆ, ಡಿಎಪಿ ಬಳಕೆ ಪ್ರಮಾಣ 30 ಸಾವಿರ ಟನ್‌ನಷ್ಟು ತಗ್ಗಿದೆ’ ಎಂದು ಕೃಷಿ ಆಯುಕ್ತ ವೈ.ಎಸ್‌. ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.