ADVERTISEMENT

ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ, 13 ಜಿಲ್ಲೆಗಳಲ್ಲಿ ಇಂದು 'ಯೆಲ್ಲೊ ಅಲರ್ಟ್'

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 19:43 IST
Last Updated 11 ಜುಲೈ 2020, 19:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಜು.12ರಿಂದ 16ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತುಮಕೂರು, ಶಿವಮೊಗ್ಗ, ರಾಮನಗರ, ಕೋಲಾರ, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾನುವಾರದಂದು ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ನಿರೀಕ್ಷೆಯಿದ್ದು, ಎಲ್ಲ ಜಿಲ್ಲೆಗಳಲ್ಲಿ 'ಯೆಲ್ಲೊ ಅಲರ್ಟ್' ಘೋಷಿಸಲಾಗಿದೆ.

ಉತ್ತರ ಒಳನಾಡಿನಲ್ಲಿ ಮಳೆ ತಗ್ಗಿದೆ. ಸೋಮವಾರದಿಂದ ಕರಾವಳಿ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ. ಕರಾವಳಿಯಲ್ಲಿ ವೇಗವಾದ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಸಿದೆ.

ಮಳೆ-ಎಲ್ಲಿ, ಎಷ್ಟು?: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಗರಿಷ್ಠ 11 ಸೆಂ.ಮೀ ಮಳೆಯಾಗಿದೆ. ಕಾರವಾರ 10, ಭಟ್ಕಳ, ಕುಂದಾಪುರ 4, ಕಮಲಾಪುರ 3, ಬೀದರ್, ಚಿಂಚೋಳಿ, ಸಿಂಧನೂರು 2, ಬೈಲಹೊಂಗಲ, ನರಗುಂದ, ಕಲಬುರ್ಗಿ, ಕೋಲಾರ, ಹೊಸಕೋಟೆ, ಗೌರಿಬಿದನೂರು ಹಾಗೂ ಮಧುಗಿರಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ADVERTISEMENT

ತಗ್ಗಿದ ಮಳೆ ಅಬ್ಬರ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಅಬ್ಬರ ತಗ್ಗಿದೆ. ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲಿ ಶನಿವಾರ ಮಳೆ ತಗ್ಗಿದ್ದರ ಪರಿಣಾಮ ಕೃಷ್ಣಾ ನದಿಯ ಹರಿವು ಇಳಿಕೆಯಾಗಿದೆ. ಆದರೂ, ಬೆಳಗಾವಿ ಜಿಲ್ಲೆಯ 7 ಬ್ಯಾರೇಜ್‌ಗಳು ಇನ್ನೂ ಮುಳುಗಡೆ ಸ್ಥಿತಿಯಲ್ಲಿಯೇ ಇವೆ.
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 51,250 ಕ್ಯುಸೆಕ್ ಮತ್ತು ದೂಧಗಂಗಾ ನದಿಯಿಂದ 16,544 ಕ್ಯುಸೆಕ್ ಸೇರಿ ಚಿಕ್ಕೋಡಿಯ ಕಲ್ಲೋಳ ಬಳಿ ಕೃಷ್ಣಾ ನದಿಗೆ 67,794 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲ್ಲೂಕಿನ 7 ಬ್ಯಾರೇಜ್‌ಗಳು ಇನ್ನೂ ಮುಳುಗಡೆ ಸ್ಥಿತಿಯಲ್ಲಿವೆ.

ಆಲಮಟ್ಟಿ ಅಣೆಕಟ್ಟೆಗೆ ಶನಿವಾರ 6.37 ಟಿಎಂಸಿ ಅಡಿ ನೀರು ಹರಿದು ಬಂದಿದೆ. 280 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಆರಂಭಿಸಲಾಗಿದ್ದು, 35 ಸಾವಿರ ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ. ತುಂಗಭದ್ರಾ ಅಣೆಕಟ್ಟೆಗೆ ಎರಡೂವರೆ ಅಡಿಯಷ್ಟು ನೀರು ಬಂದಿದೆ. ಗದುಗಿನಲ್ಲಿ ಒಂದು ಗಂಟೆ ಕಾಲ ಮಳೆಯಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಮಳೆ ಕ್ಷೀಣಿಸಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆ ಕಡಿಮೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.