ADVERTISEMENT

ಬೆಂಗಳೂರು: ಒಂದೇ ವಾರದಲ್ಲಿ 160 ಮಕ್ಕಳಿಗೆ ಕೋವಿಡ್‌ ದೃಢ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 5:42 IST
Last Updated 24 ಮಾರ್ಚ್ 2021, 5:42 IST
ಸಾಂದರ್ಭಿಕ: ಐಸ್ಟಾಕ್ ಸಂಗ್ರಹ ಚಿತ್ರ
ಸಾಂದರ್ಭಿಕ: ಐಸ್ಟಾಕ್ ಸಂಗ್ರಹ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ 2ನೇ ಅಲೆ ಬಿರುಸಾಗುತ್ತಿದೆ. ಅದರಲ್ಲೂ ಮಕ್ಕಳಲ್ಲಿ ಹೆಚ್ಚು ಕೋವಿಡ್ ಪಾಸಿಟಿವ್ ಕಂಡುಬರುತ್ತಿರುವುದು ಆತಂಕಕ್ಕೆ ಎಡೆಮಾಡಿದೆ. ರಾಜ್ಯ ಸರ್ಕಾರದಿಂದ ಪಡೆದ ಮಾಹಿತಿಯ ಪ್ರಕಾರ, ಒಂದರಿಂದ 10 ವರ್ಷ ವಯಸ್ಸಿನ ಹೆಚ್ಚಿನ ಮಕ್ಕಳಲ್ಲಿ ಕೋವಿಡ್ -19 ಪಾಸಿಟಿವ್ ಕಂಡುಬರುತ್ತಿದೆ.

ಮಾರ್ಚ್ 14 ರಿಂದ 21 ರವರೆಗೆ ಒಂದೇ ವಾರದಲ್ಲಿ ಬೆಂಗಳೂರಿನಲ್ಲಿ 160 ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ, ಅದರಲ್ಲೂ ಶನಿವಾರ ಮತ್ತು ಭಾನುವಾರದಂದು ಸೋಂಕಿತ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಕ್ರಮವಾಗಿ 33 ಮತ್ತು 32 ರಷ್ಟಿದೆ.

ಕೋವಿಡ್ -19 ವಾರ್ ರೂಮ್ ಮಾಹಿತಿಯ ಪ್ರಕಾರ, ಕಳೆದ ಎರಡು ವಾರಗಳ ಅವಧಿಯಲ್ಲಿ ರಾಜ್ಯದಲ್ಲಿ 267 ಮಕ್ಕಳಲ್ಲಿ ಸೋಂಕು ಕಂಡುಬಂದಿವೆ. ಕಳೆದ ವರ್ಷದ ಜೂನ್ 24, 2020ರಿಂದ ಪ್ರತಿ ದಿನ ಸುಮಾರು 16 ಮಕ್ಕಳಲ್ಲಿ ಕೋವಿಡ್ ಪಾಸಿಟಿವ್ ವರದಿಯಾಗುತ್ತಿವೆ.

2020ರಲ್ಲಿ, ಹೆಚ್ಚಿನ ಮಕ್ಕಳು ಪೋಷಕರು ಅಥವಾ ಸಂಬಂಧಿಕರಿಂದ ಅಥವಾ ಅವರ ಕುಟುಂಬಗಳೊಂದಿಗೆ ಪ್ರಯಾಣಿಸುವಾಗ ಸೋಂಕಿಗೆ ತುತ್ತಾಗಿದ್ದರು. ಸದ್ಯದ ಪರಿಸ್ಥಿತಿ ಸಹ ಬಹುತೇಕ ಅದೇ ರೀತಿಯಾಗಿದೆ ಎಂದು ರಾಜ್ಯದ ಕ್ರಿಟಿಕಲ್ ಕೇರ್ ಸಪೋರ್ಟ್ ಯುನಿಟ್ (ಸಿಸಿಎಸ್‌ಯು) ಸದಸ್ಯ ಡಾ.ಅನೂಪ್ ಅಮರನಾಥ್ ಹೇಳಿದ್ದಾರೆ.

ADVERTISEMENT

‘ಸದ್ಯ, ಜನರು ಕೋವಿಡ್ ಮುನ್ನೆಚ್ಚರಿಕೆಗಳನ್ನು ಕಡೆಗಣಿಸಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಿವೆ. ಅಜ್ಜ-ಅಜ್ಜಿಯರಿಂದ ಹಿಡಿದು ಮಕ್ಕಳವರೆಗೆ ಇಡೀ ಕುಟುಂಬ ಕೊರೊನಾ ಸೋಂಕಿಗೆ ತುತ್ತಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಪರಿಣಾಮವಾಗಿ, ಸೋಂಕಿತ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ,’ ಎಂದು ಡಾ ಅಮರನಾಥ್ ಹೇಳಿದ್ದಾರೆ.

‘ಅನೇಕ ಕುಟುಂಬಗಳಲ್ಲಿ ಕೋವಿಡ್ ಪಾಸಿಟಿವ್ ಕಂಡುಬರುತ್ತಿರುವುದನ್ನು ನೋಡಿ ನಮಗೆ ಆಶ್ಚರ್ಯವಾಗಿದೆ. ಜನರು ತಮ್ಮನ್ನು ತಾವು ಸರಿಯಾಗಿ ಐಸೊಲೇಟ್ ಮಾಡಿಕೊಳ್ಳುತ್ತಿಲ್ಲ. ’ ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ ಪ್ರಸಾದ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.