ಚಿಕ್ಕೋಡಿ ತಾಲ್ಲೂಕಿನ ಇಟ್ನಾಳ ಗ್ರಾಂದಲ್ಲಿ ಶೆಂಡೂರೆ ದಂಪತಿ ಸಾಕಿರುವ ಮೇಕೆಗಳಿಗೆ ಗುಲಾಲು ಎರಚಿ ಆರತಿ ಬೆಳಗಿ ಪೂಜೆ ಸಲ್ಲಿಸಿ ವ್ಯಾಪಾರಿಗಳಿಗೆ ಹಸ್ತಾಂತರಿಸಿದರು.
ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಇಟ್ನಾಳ ಗ್ರಾಮದ ರೈತ ದಂಪತಿ ಶಿವಪ್ಪ ಶೆಂಡೂರೆ ಮತ್ತು ಶಾಂತಾ ಸಾಕಿದ ಎರಡು ಮೇಕೆಗಳು ₹5.10 ಲಕ್ಷಕ್ಕೆ ಮಾರಾಟವಾಗಿವೆ. ಪಂಜಾಬ್ ಮೂಲದ ಬೀಟಲ್ ತಳಿಯ ಒಂದು ಮೇಕೆ ₹3 ಲಕ್ಷ ಮತ್ತು ಇನ್ನೊಂದು ಮೇಕೆ ₹2.10 ಲಕ್ಷಕ್ಕೆ ಬಿಕರಿಯಾಗಿದೆ.
ಬಕ್ರೀದ್ ಹಿನ್ನೆಲೆಯಲ್ಲಿ ಎರಡೂ ಮೇಕೆಗಳನ್ನು ವಿಜಯಪುರದ ಮೋಜಿಮ್ ಮತ್ತು ಆಸಿಫ್ ಎಂಬ ವ್ಯಾಪಾರಿಗಳು 15 ದಿನಗಳ ಹಿಂದೆ ಮುಂಗಡ ಹಣ ನೀಡಿ, ಕಾಯ್ದಿರಿಸಿದ್ದರು. ಪೂರ್ಣಪ್ರಮಾಣದ ಹಣ ನೀಡಿ, ಖರೀದಿಸಿದರು. ಮೇಕೆಗಳಿಗೆ ಗುಲಾಲು ಎರಚಿ, ಪೂಜೆ ಸಲ್ಲಿಸಿ, ಹೂವಿನ ಹಾರ ಹಾಕಿ, ಆರತಿ ಬೆಳಗಿ ಬೀಳ್ಕೊಡಲಾಯಿತು.
ಎರಡೂವರೆ ವರ್ಷ ವಯಸ್ಸಿನ ಎರಡೂ ಮೇಕೆಗಳು ತಲಾ ಎರಡು ಕ್ವಿಂಟಲ್ ತೂಕವಿದ್ದು, 4 ಅಡಿ ಎತ್ತರ ಇವೆ. ಅವುಗಳಿಗೆ ಪ್ರತಿದಿನ ಮೆಕ್ಕೆಜೋಳದ ನುಚ್ಚು, ಶೇಂಗಾದ ಹಿಂಡಿ, ಸದಕ, ಕಾಳು ಮುಂತಾದ ಆಹಾರ ನೀಡಲಾಗುತ್ತಿತ್ತು.
ಕಳೆದ ವರ್ಷ ಕೂಡ ಶೆಂಡೂರೆ ದಂಪತಿ ಸಾಕಿದ ಬೀಟಲ್ ತಳಿಯ 11 ತಿಂಗಳ ಮೇಕೆ ಮರಿಯನ್ನು ₹1.80 ಲಕ್ಷಕ್ಕೆ ಮಾರಿದ್ದರು. ಅದಕ್ಕೆ ಈ ಬಾರಿ ಅದೇ ತಳಿಯ ನಾಲ್ಕು ಮೇಕೆ ಮರಿಗಳನ್ನು ₹1.60 ಲಕ್ಷಕ್ಕೆ ಖರೀದಿಸಿದ್ದರು. ಎರಡು ಮೇಕೆಗಳು ಸಾವನ್ನಪ್ಪಿದವು. ಇನ್ನೆರಡು ಮರಿಗಳನ್ನು 11 ತಿಂಗಳು ಸಾಕಿ, ಈಗ ಮಾರಿದರು.
ಬೀಟಲ್ ತಳಿಯ ಮೇಕೆ ದೊಡ್ಡ ದೇಹ, ಉದ್ದದ ಕಿವಿ, ಸಣ್ಣ ಮುಖ ಹೊಂದಿವೆ. ಮಾಂಸಕ್ಕೆಂದೇ ಈ ತಳಿಯ ಮೇಕೆಗಳನ್ನು ಸಾಕಲಾಗುತ್ತದೆ. ಜಮ್ನಾಪುರಿ, ಮಲಬಾರಿ ತಳಿಯನ್ನು ಹೋಲುವ ಇದನ್ನು ಲಾಹೋರಿ ಮೇಕೆ ಎಂದೂ ಕರೆಯಲಾಗುತ್ತದೆ.
ನಮಗೆ ಮೂರು ಎಕರೆ ಜಮೀನು ಇದೆ. ಕೃಷಿ ಜತೆಗೆ ಉಪಕಸುಬಾಗಿ ಪಂಜಾಬ್ ಮೂಲದ ಬೀಟಲ್ ತಳಿಯ ಮೇಕೆಮರಿಗಳನ್ನು ಸಾಕುತ್ತೇವೆ. ಇದು ನಮ್ಮ ಕೈ ಹಿಡಿದಿದೆ–ಶಿವಪ್ಪ ಶೆಂಡೂರೆ, ಕೃಷಿಕ
ಬೀಟಲ್ ತಳಿಯ ಈ ಮೇಕೆಗಳನ್ನು ಮಾಂಸಕ್ಕಾಗಿ ಸಾಕಿಅವುಗಳನ್ನು ಚೆನ್ನಾಗಿ ಬೆಳೆಸಲಾಗುತ್ತದೆ. ಈ ಭಾಗದಲ್ಲಿ ಇಂಥ ಮೇಕೆಗಳ ಮಾಂಸಕ್ಕೆ ಭಾರೀ ಬೇಡಿಕೆ ಇದೆ.–ಆಸಿಫ್, ಮೇಕೆ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.