ADVERTISEMENT

ಮದ್ದೂರು | ಕಲುಷಿತ ನೀರು ಸೇವನೆ: 50 ಮಂದಿ ಅಸ್ವಸ್ಥ, ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 14:32 IST
Last Updated 17 ಜೂನ್ 2022, 14:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮದ್ದೂರು (ಮಂಡ್ಯ ಜಿಲ್ಲೆ): ತಾಲ್ಲೂಕಿನ ನಗರಕೆರೆ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 50ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ವಾಂತಿ–ಭೇದಿಯಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿದ್ದು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾರೆ.

ಗ್ರಾಮದ ನಾಗಲಿಂಗಯ್ಯ (48) ಮೃತಪಟ್ಟಿದ್ದಾರೆ, ಯುವತಿಯೊಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜೂನ್‌ 13ರಂದು ಘಟನೆ ನಡೆದಿದ್ದು ವ್ಯಕ್ತಿ ಮೃತಪಟ್ಟ ನಂತರ ಬೆಳಕಿಗೆ ಬಂದಿದೆ. ಕಲುಷಿತ ನೀರು ಸೇವನೆ ನಂತರ ಗ್ರಾಮಸ್ಥರು ವಾಂತಿ, ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ.

ಸಮರ್ಪಕ ನಿರ್ವಹಣೆ ಇಲ್ಲದ ಟ್ಯಾಂಕ್‌ನಿಂದ ಮನೆಗಳಿಗೆ ಸರಬರಾಜಾಗುವ ನೀರು ಸೇವಿಸಿದ ಪರಿಣಾಮ ಘಟನೆ ನಡೆದಿದೆ. ಪಟ್ಟಣದ ತಾಲ್ಲೂಕು ಆಸ್ಪತ್ರೆ, ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆಯಲಾಗಿದ್ದು, ಗ್ರಾಮಸ್ಥರ ಆರೋಗ್ಯ ತಪಾಸಣೆ ತಪಾಸಣೆ ನಡೆಸಲಾಗುತ್ತಿದೆ.

ADVERTISEMENT

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಗ್ರಾಮದಲ್ಲಿ ಟ್ಯಾಂಕ್‌ ಮೂಲಕ ಸರಬರಾಜು ಮಾಡಲಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ. ಮೃತ ನಾಗಲಿಂಗಯ್ಯ ಅವರಿಗೆ ವಾಂತಿ ಭೇದಿ ಜೊತೆಗೆ ಎದೆ ನೋವು ಕಾಣಿಸಿಕೊಂಡು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವೈದ್ಯಕೀಯ ಸಿಬ್ಬಂದಿ ಗ್ರಾಮದಲ್ಲೇ ಇದ್ದು ಆರೋಗ್ಯ ಅರಿವು ಮೂಡಿಸುತ್ತಿದ್ದಾರೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ರವೀಂದ್ರ ಬಿ ಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.