ADVERTISEMENT

ರಾಸಾಯನಿಕ ಮುಕ್ತ ಕೃಷಿಯತ್ತ ಚಿತ್ತ: ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 15:44 IST
Last Updated 16 ಜೂನ್ 2025, 15:44 IST
ಸಭೆಯಲ್ಲಿ ಮಾಜಿ ಶಾಸಕ ಡಿ.ಆರ್‌.ಪಾಟೀಲ ಮಾತನಾಡಿದರು. ನೈಸರ್ಗಿಕ ಕೃಷಿಕ ಸುಭಾಷ್ ಪಾಳೇಕರ್‌, ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ, ಇಲಾಖೆ ಕಾರ್ಯದರ್ಶಿ ರವಿಶಂಕರ್, ಆಯುಕ್ತ ವೈ.ಎಸ್. ಪಾಟೀಲ ಪಾಲ್ಗೊಂಡಿದ್ದರು.
ಸಭೆಯಲ್ಲಿ ಮಾಜಿ ಶಾಸಕ ಡಿ.ಆರ್‌.ಪಾಟೀಲ ಮಾತನಾಡಿದರು. ನೈಸರ್ಗಿಕ ಕೃಷಿಕ ಸುಭಾಷ್ ಪಾಳೇಕರ್‌, ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ, ಇಲಾಖೆ ಕಾರ್ಯದರ್ಶಿ ರವಿಶಂಕರ್, ಆಯುಕ್ತ ವೈ.ಎಸ್. ಪಾಟೀಲ ಪಾಲ್ಗೊಂಡಿದ್ದರು.   

ಬೆಂಗಳೂರು: ‘ತಕ್ಷಣದಲ್ಲಿ ಸಂಪೂರ್ಣ ಕೃಷಿ ಪದ್ಧತಿ ಬದಲಾಯಿಸುವುದು ಕಷ್ಟ. ಪ್ರತಿ ಗ್ರಾಮದಲ್ಲೂ ಪ್ರಾಯೋಗಿಕವಾಗಿ ಕೃಷಿ ಜಮೀನನ್ನು ಭಾಗಶಃ ರಾಸಾಯನಿಕ ಮುಕ್ತವಾಗಿ ಪರಿವರ್ತಿಸಲು ಜಾಗೃತಿ ಮೂಡಿಸುವ ಮತ್ತು ಮಾರ್ಗದರ್ಶನ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು.

ಸುಭಾಷ್ ಪಾಳೇಕರ್ ಕೃಷಿಯ ಸಾಧಕ- ಬಾಧಕಗಳ ಕುರಿತು ವಿಕಾಸಸೌಧದಲ್ಲಿ ತಜ್ಞರು, ಅನುಭವಿಗಳು ಹಾಗೂ ಅಧಿಕಾರಿಗಳೊಂದಿಗೆ ಅವರು ಚರ್ಚೆ ನಡೆಸಿ ಮಾತನಾಡಿದರು.

‘ಭೂಮಿಯ ಫಲವತ್ತತೆ ಮತ್ತು ಹವಾಮಾನ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ರಾಸಾಯನಿಕ ಮುಕ್ತ ಕೃಷಿಯ ಕಡೆಗೆ ಗಮನಹರಿಸಬೇಕಾಗಿದೆ. ರಾಜ್ಯ ಸರ್ಕಾರ ನೈಸರ್ಗಿಕ, ಸಾವಯವ ಕೃಷಿಯ ಜಾಗೃತಿ ಹಾಗೂ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳಲಿದೆ. ನಾಲ್ಕೂ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಈ ಸಂಬಂಧ ಪ್ರಯೋಗಗಳನ್ನು ಹೆಚ್ಚಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು’ ಎಂದು ಅವರು ಸೂಚನೆ ನೀಡಿದರು.

ADVERTISEMENT

‘ಪ್ರತಿ ಜಿಲ್ಲೆಯಲ್ಲೂ ಸಾವಯವ ಕೃಷಿ ವಿಸ್ತರಣೆ ಜೊತೆಗೆ ಸುಭಾಷ್ ಪಾಳೇಕರ್‌ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸುವ ಬಗ್ಗೆಯೂ ಪ್ರಾತ್ಯಕ್ಷಿಕೆ ಹಾಗೂ ಕಾರ್ಯಾಗಾರಗಳನ್ನು ಏರ್ಪಡಿಸಲು ಇಲಾಖಾಧಿಕಾರಿಗಳಿಗೆ ಮತ್ತು ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಲಾಗುವುದು’ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ನೈಸರ್ಗಿಕ ಕೃಷಿಕ ಡಾ.ಸುಭಾಷ್ ಪಾಳೇಕರ್ ಮಾತನಾಡಿ, ‘ಕೃಷಿಯಲ್ಲಿ ಅತಿಯಾದ ರಾಸಾಯನಿಕ, ಕೀಟನಾಶಕಗಳ ಬಳಕೆಯಿಂದ ಭೂಮಿಯ ಫಲವತ್ತತೆ ನಾಶವಾಗುತ್ತಿದೆ. ತಿನ್ನುವ ಆಹಾರ ಕೂಡ ವಿಷಕಾರಿಯಾಗುತ್ತಿದೆ. ಜೀವಾಮೃತಗಳ ಬಳಕೆಯ ಮೂಲಕ ಅತ್ಯಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಪೂರ್ಣ ಆಹಾರ ಬೆಳೆಯುವ ಪದ್ಧತಿ ಅನುಸರಿಸುವುದು ಅತ್ಯಗತ್ಯ’ ಎಂದು ಪ್ರತಿಪಾದಿಸಿದರು.

‘ದೇಶದಲ್ಲಿ ಸ್ವಾವಲಂಬಿ ಕೃಷಿ ಮಾರ್ಗವಿದೆ. ಆದರೆ, ಅತಿಯಾದ ರಸಗೊಬ್ಬರ, ಕೀಟನಾಶಕಗಳ ಬಳಕೆಯಿಂದ ಭೂಮಿ ಬರಡಾಗುತ್ತಿದೆ. ಮಣ್ಣಿನಲ್ಲಿ ಇಂಗಾಲದ ಅಂಶ ಕಡಿಮೆಯಾಗಿ ಲವಣದ ಅಂಶ ಹೆಚ್ಚಾಗುತ್ತಿದೆ. ಇದಕ್ಕೆ ತುರ್ತು ಕಡಿವಾಣ ಹಾಕದಿದ್ದರೆ ಮಾನವ ಕುಲಕ್ಕೆ ಅಪಾಯ ತಪ್ಪಿದ್ದಲ್ಲ’ ಎಂದು ಅವರು ಹೇಳಿದರು.

‘ರೈತರಲ್ಲಿ ಈ ಕುರಿತು ಅರಿವು ಮೂಡಿಸಿ ನೈಸರ್ಗಿಕ ಕೃಷಿಯತ್ತ ಆಕರ್ಷಿಸಬೇಕು. ತೀರ ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿ ದೊರೆಯುವುದರಿಂದ ಕೃಷಿಕರಿಗೆ, ದೇಶಕ್ಕೆ ಮತ್ತು ಸಾಮಾನ್ಯ ಜನರಿಗೆ ಉಪಕಾರಿ. ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ನಾವು ಸಂಶೋಧಿಸಿರುವ ಈ ಪದ್ಧತಿಯನ್ನು ಜಾರಿಗೊಳಿಸಬಹುದು. ರಾಸಾಯನಿಕಗಳಿಗೆ ಎದುರಾಗಿ ಸಹಜತೆಯಿಂದಲೇ ಕೃಷಿ ಮಾಡುವುದನ್ನು ರೂಢಿಸಿಕೊಳ್ಳಲು ಸಹಕರಿಸಬೇಕು’ ಎಂದು ಪಾಳೇಕರ್ ಮನವಿ ಮಾಡಿದರು.

ಮಾಜಿ ಶಾಸಕ ಡಿ.ಆರ್‌.ಪಾಟೀಲ, ಕೃಷಿ ಇಲಾಖೆ ಕಾರ್ಯದರ್ಶಿ ಡಾ.ರವಿಶಂಕರ್, ಆಯುಕ್ತ ವೈ.ಎಸ್.ಪಾಟೀಲ, ನಿರ್ದೇಶಕ ಡಾ.ಜಿ.ಟಿ.ಪುತ್ರ, ವಿವಿಧ ಕೃಷಿ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು ಅಧಿಕಾರಿಗಳು, ಕೃಷಿ ತಜ್ಞರು ಸಭೆಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.