ADVERTISEMENT

ಬೊಮ್ಮಾಯಿ ಸಂಪುಟ: ಕೊಡಗಿನ ಅಪ್ಪಚ್ಚು ರಂಜನ್‌, ಕೆ.ಜಿ.ಬೋಪಯ್ಯಗೆ ನಿರಾಸೆ

ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯಗೆ ಸಿಗದ ಸಚಿವ ಸ್ಥಾನ

ಅದಿತ್ಯ ಕೆ.ಎ.
Published 4 ಆಗಸ್ಟ್ 2021, 13:41 IST
Last Updated 4 ಆಗಸ್ಟ್ 2021, 13:41 IST
ಕೆ.ಜಿ.ಬೋಪಯ್ಯ
ಕೆ.ಜಿ.ಬೋಪಯ್ಯ   

ಮಡಿಕೇರಿ: ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಕೊಡಗು ಜಿಲ್ಲೆಯು, ಈ ಬಾರಿಯೂ ಸಚಿವ ಸ್ಥಾನದಿಂದ ವಂಚಿತವಾಗಿದೆ. ಜಿಲ್ಲೆಯಲ್ಲಿ ಇಬ್ಬರು ಬಿಜೆಪಿ ಶಾಸಕರು ಹಾಗೂ ಒಬ್ಬ ವಿಧಾನ ಪರಿಷತ್‌ ಸದಸ್ಯರಿದ್ದರೂ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ಸೇರುವ ನಿರೀಕ್ಷೆ ಹಾಗೂ ಉತ್ಸಾಹದಲ್ಲಿದ್ದ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌, ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯಗೆ ಮತ್ತೊಮ್ಮೆ ನಿರಾಸೆಯಾಗಿದೆ. ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಮೊಗದಲ್ಲೂ ಕಾರ್ಮೋಡ ಕವಿಯುವಂತೆ ಮಾಡಿದೆ.

ಇಬ್ಬರು ಹಿರಿಯ ಶಾಸಕರು ಹಾಗೂ ಕಾರ್ಯಕರ್ತರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿಲ್ಲ. ಆದರೆ, ತಮ್ಮ ಆಪ್ತ ವಲಯದಲ್ಲಿ, ವರಿಷ್ಠರ ವಿರುದ್ಧ ಕಿಡಿಕಾರಿದ್ದಾರೆ ಎಂದು ಗೊತ್ತಾಗಿದೆ. ಎಲ್ಲ ಚುನಾವಣೆಗಳಲ್ಲೂ ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶವೇ ಲಭಿಸುತ್ತಿದೆ. ಆದರೆ, ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಯ ಶಾಸಕರು ಸಚಿವ ಸ್ಥಾನದಿಂದ ವಂಚಿತರಾಗುತ್ತಿದ್ದಾರೆ ಎಂದು ಕಾರ್ಯಕರ್ತರೊಬ್ಬರು ದೂರಿದರು.

ADVERTISEMENT



ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಈ ಇಬ್ಬರು ಶಾಸಕರು ಸಚಿವ ಸ್ಥಾನ ನಿರೀಕ್ಷೆಯಲ್ಲಿದ್ದರು. ಆಗಲೂ ಅವಕಾಶ ಸಿಕ್ಕಿರಲಿಲ್ಲ. ರಂಜನ್‌ ಅವರು ಬಹಿರಂಗವಾಗಿಯೇ ‘ನಾನು ಪ್ರಬಲ ಆಕಾಂಕ್ಷಿ’ ಎಂದು ಹೇಳಿಕೊಂಡಿದ್ದರು. ‘ಐದು ಬಾರಿ ಗೆದ್ದಿದ್ದೇನೆ. ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದೇನೆ. ನಮಗೂ ಅವಕಾಶ ನೀಡಬೇಕು’ ಎಂದು ಆಗ್ಗಾಗ್ಗೆ ನೆನಪಿಸುತ್ತಿದ್ದರು. ಬಿಎಸ್‌ವೈ ಮುಖ್ಯಮಂತ್ರಿ ಆಗಿದ್ದ ವೇಳೆ ಸಂಪುಟಕ್ಕೆ ಸೇರಿಸಿಕೊಳ್ಳದಿದ್ದಾಗ, ತಮ್ಮ ಅಸಮಾಧಾನ ಹೊರಹಾಕಿದ್ದರು.

‘ಸಚಿವ ಸ್ಥಾನ ನೀಡುವಂತೆ ಯಾರನ್ನೂ ಕೇಳಿರಲಿಲ್ಲ. ಸಿಗದಿರುವುದಕ್ಕೆ ಯಾವುದೇ ಬೇಸರವೂ ಇಲ್ಲ’ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದ್ದಾರೆ.



‘ಜಿಲ್ಲೆಯಲ್ಲಿ ಸಾಲು ಸಾಲು ಸಮಸ್ಯೆಗಳಿವೆ. ಆನೆ–ಮಾನವ ಸಂಘರ್ಷ, ನಿರಂತರ ಹುಲಿ ದಾಳಿ, ಮಳೆಯಿಂದ ಪ್ರತಿವರ್ಷವೂ ಅನಾಹುತ ಸಂಭವಿಸತ್ತಲೇ ಇರುತ್ತದೆ. ಮೂರು ವರ್ಷಗಳ ನೆರೆ ಸಂತ್ರಸ್ತರಿಗೆ ಇನ್ನೂ ಸೂಕ್ತ ಪರಿಹಾರ ಸಿಕ್ಕಿಲ್ಲ. ಭೂಕುಸಿತದಿಂದ ಕೃಷಿಗೆ ಜಮೀನಿನಲ್ಲಿ ಸಂಗ್ರಹಿಸಿದ್ದ ಮಣ್ಣು ತೆರವುಗೊಂಡಿಲ್ಲ. ನದಿ ಹಾಗೂ ಹೊಳೆಗಳಲ್ಲಿ ಹೂಳು ತುಂಬಿದೆ. ಕಾರ್ಮಿಕರ ಸಂಕಷ್ಟಕ್ಕೂ ಪರಿಹಾರ ಕಂಡಿಲ್ಲ. ಸ್ಥಳೀಯರೇ ಸಚಿವರಾದರೆ ಕೆಲವು ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯವಾಗುತ್ತಿತ್ತು. ಯಾಕೋ ಕೊಡಗಿಗೆ ಪದೇ ಪದೇ ಅನ್ಯಾಯವಾಗುತ್ತಿದೆ’ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.