ADVERTISEMENT

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಬೇಲಿ ಕಳ್ಳತನ: ಫೋಟೊ ಹಂಚಿಕೊಂಡ ಪ್ರತಾಪ ಸಿಂಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜೂನ್ 2023, 6:50 IST
Last Updated 5 ಜೂನ್ 2023, 6:50 IST
ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ವಿದ್ಯುತ್ ಕಂಬಗಳ ಬ್ರೆಸಿಂಗ್ ಕದ್ದಿರುವ ದೃಶ್ಯ
ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ವಿದ್ಯುತ್ ಕಂಬಗಳ ಬ್ರೆಸಿಂಗ್ ಕದ್ದಿರುವ ದೃಶ್ಯ   

ಬೆಂಗಳೂರು: ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಕಂಗೆಡಿಸಿವೆ. ಹೆದ್ದಾರಿಯ ಎರಡೂ ಬದಿಯಲ್ಲಿ ಅಳವಡಿಸಿರುವ ಕಬ್ಬಿಣದ ಬೇಲಿ ಸೇರಿದಂತೆ ಬೆಲೆ ಬಾಳುವ ಪರಿಕರಗಳನ್ನು ಕದ್ದೊಯ್ದ ಪ್ರಕರಣಗಳು ವರದಿಯಾಗಿವೆ.

ಇದರ ಬೆನ್ನಲ್ಲೇ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ವಿದ್ಯುತ್ ಕಂಬಗಳ ಬ್ರೆಸಿಂಗ್ ಕದ್ದಿರುವ ಫೋಟೊಗಳನ್ನು ಸಂಸದ ಪ್ರತಾಪ ಸಿಂಹ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ‘ಕದ್ದ ಬ್ರೆಸಿಂಗ್ ಅನ್ನು ಗುಜರಿಗೆ ಹಾಕುತ್ತಿದ್ದಾರೆ ಎಂಬುದಕ್ಕೆ ತಾಜಾ ಉದಾಹರಣೆ ನೋಡಿ ಹಾಗು ವ್ಯತ್ಯಾಸ ಗಮನಿಸಿ’ ಎಂದು ಬರೆದುಕೊಂಡಿದ್ದಾರೆ.

‘ದಶಪಥ ಹೆದ್ದಾರಿಯಲ್ಲಿ ಬೇಲಿಯೇ ನಾಪತ್ತೆ’ ಎಂಬ ವಿಶೇಷ ವರದಿ ‘ಪ್ರಜಾವಾಣಿ’ಯಲ್ಲಿ ಶುಕ್ರವಾರ ಪ್ರಕಟವಾಗಿತ್ತು.

ADVERTISEMENT

ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಮಾತನಾಡಿದ್ದ ಪ್ರತಾಪ ಸಿಂಹ, ‘ಮೈಸೂರು– ಬೆಂಗಳೂರು ದಶಪಥ ಹೆದ್ದಾರಿಯ ಬದಿಯಲ್ಲಿ ಅಳವಡಿಸಿರುವ ಬೇಲಿಯನ್ನು ಕಳವು ಮಾಡಬೇಡಿ. ನಿಮ್ಮದೇ ಹಣದಲ್ಲಿ ನಿರ್ಮಿಸಿದ ಯೋಜನೆಯ ರಕ್ಷಣೆ ಹೊಣೆಯೂ ನಿಮ್ಮದೇ’ ಎಂದು ವಿನಂತಿಸಿದ್ದರು.

‘ದಕ್ಷಿಣ ಭಾರತದ ಮೊದಲನೇ ಪ್ರವೇಶ ಮತ್ತು ನಿರ್ಗಮನ ನಿರ್ಬಂಧಿತ ಹೆದ್ದಾರಿಯಲ್ಲಿ ಯಾರೂ ಒಳ ಪ್ರವೇಶಿಸಬಾರದೆಂಬ ಉದ್ದೇಶದಿಂದ ಎರಡೂ ಕಡೆಗಳಲ್ಲೂ ಬೇಲಿ ಅಳವಡಿಸಿದ್ದೇವೆ. ಅವನ್ನು ತುಂಡರಿಸಿ ಕೊಂಡೊಯ್ಯುತ್ತಿರುವುದು ನಾಚಿಗೆಗೇಡಿನ ವಿಚಾರ. ಮನೆಯಲ್ಲಿ ಅನಗತ್ಯವಾಗಿರುವ ವಸ್ತುವನ್ನು ಗುಜರಿಗೆ ಹಾಕಿ, ಇದನ್ನು ಬಿಟ್ಟು ಸಾರ್ವಜನಿಕ ಆಸ್ತಿಗೆ ತೊಂದರೆ ನೀಡಬೇಡಿ’ ಎಂದಿದ್ದರು.

‘ಮೈಸೂರು, ಮಂಡ್ಯ, ರಾಮನಗರ ಭಾಗದಲ್ಲಿ ಯಾರಾದರೂ ತಂತಿ ಬೇಲಿ ಕಳವು ಮಾಡುತ್ತಿರುವುದು ಕಂಡುಬಂದರೆ ಮಾಹಿತಿ ನೀಡಿ. ರಾಜ್ಯ ಸರ್ಕಾರವು ರಸ್ತೆ ಸುರಕ್ಷತೆ ಕಾಯ್ದೆಯಲ್ಲಿ ಬಿಡುಗಡೆ ಮಾಡುವ ಹಣದಲ್ಲಿ ಈ ಹೆದ್ದಾರಿಗೆ ಕೃತಕ ಬುದ್ಧಿಮತ್ತೆ ಸಾಮರ್ಥ್ಯದ (ಎಐ) ಕ್ಯಾಮೆರಾಗಳನ್ನು ಅಳವಡಿಸಲು ₹80 ಕೋಟಿ ಅನುದಾನ ಕೋರಿದ್ದೇವೆ. ಅದನ್ನು ಅಳವಡಿಸುವವರೆಗೆ ಆಸ್ತಿ ರಕ್ಷಿಸಲು ಸಾರ್ವಜನಿಕರು ಸಹಕರಿಸಬೇಕು. ಬೇಲಿ ತುಂಡರಿಸಿ ವಾಹನಗಳು ರಸ್ತೆಯಲ್ಲಿ ಅತ್ತಿಂದಿತ್ತ ಚಲಿಸುವುದನ್ನು ನಿಲ್ಲಿಸಿ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.