ADVERTISEMENT

ಸಂಸದೆ ಸುಮಲತಾ ಹೆಸರಿನಲ್ಲಿ ನಕಲಿ ಖಾತೆ; ಪೊಲೀಸ್ ಕಮಿಷನರ್‌ಗೆ ದೂರು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 9:46 IST
Last Updated 6 ಸೆಪ್ಟೆಂಬರ್ 2019, 9:46 IST
ಸಂಸದೆ ಸುಮಲತಾ
ಸಂಸದೆ ಸುಮಲತಾ   

ಬೆಂಗಳೂರು: ಮಂಡ್ಯ ಲೋಕಸಭೆ ಸದಸ್ಯೆ ಸುಮಲತಾ ಅಂಬರೀಷ್ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಲಾಗುತ್ತಿದ್ದು, ಆ ಸಂಬಂಧ ಸುಮಲತಾ ಅವರೇ ನಗರ ಪೊಲೀಸ್ ಕಮಿಷನರ್ ಭಾಸ್ಕರ್‌ ರಾವ್ ಅವರಿಗೆ ಶುಕ್ರವಾರ ದೂರು ಸಲ್ಲಿಸಿದರು.

ಇನ್ಫೆಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಕಮಿಷನರ್ ಕಚೇರಿಗೆ ಬಂದಿದ್ದ ಸುಮಲತಾ, ‘ಚುನಾವಣೆ ಆರಂಭವಾದಾಗಿನಿಂದ ಹಿಡಿದು ಸದ್ಯದವರೆಗೂ ನಕಲಿ ಖಾತೆ ಚಾಲ್ತಿಯಲ್ಲಿದೆ. ಇದನ್ನು ಸೃಷ್ಟಿಸಿದವರು ಯಾರು ಎಂಬುದನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಿ’ ಎಂದು ಭಾಸ್ಕರ್‌ ರಾವ್ ಅವರನ್ನು ಕೋರಿದರು.

ಸೈಬರ್‌ ಕ್ರೈಂ ಠಾಣೆಯ ಇನ್‌ಸ್ಪೆಕ್ಟರ್ ಯಶವಂತಕುಮಾರ್ ಅವರನ್ನು ಕಚೇರಿಗೆ ಕರೆಸಿದ ಭಾಸ್ಕರ್, ದೂರಿನನ್ವಯ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸೂಚನೆ ನೀಡಿದರು.

ADVERTISEMENT

ಪರಿಣಿತರಿಂದಲೇ ಖಾತೆ ನಿರ್ವಹಣೆ: ದೂರು ಸಲ್ಲಿಕೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸುಮಲತಾ, ‘ನನ್ನ ತೇಜೋವಧೆ ಮಾಡುವ ಉದ್ದೇಶದಿಂದ ಯಾರೋ ಪರಿಣಿತರೇ ನಕಲಿ ಖಾತೆ ನಿರ್ವಹಣೆ ಮಾಡುತ್ತಿದ್ದಾರೆ’ ಎಂದರು.

‘ಚುನಾವಣಾ ಸಮಯದಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಪೋಸ್ಟ್ ಪ್ರಕಟಿಸುತ್ತಿದ್ದರು. ಕಾಮೆಂಟ್‌ ಸಹ ಮಾಡುತ್ತಿದ್ದರು. ಅಂತ ಹಲವು ಖಾತೆಗಳನ್ನು ಈ ಹಿಂದೆಯೇ ಬಂದ್ ಮಾಡಿಸಲಾಗಿದೆ. ಆದರೆ, ಇದೊಂದು ಖಾತೆ ಈಗಲೂ ಇದೆ’ ಎಂದು ತಿಳಿಸಿದರು.

‘ಯಾರೋ ಹುಡುಗರು ಈ ರೀತಿ ಮಾಡುತ್ತಿರಬಹುದು. ತಪ್ಪಿನ ಅರಿವಾಗಿ ಸುಮ್ಮನಾಗುತ್ತಾರೆಂದು ಭಾವಿಸಿದ್ದೆ. ಅದೇ ನಾನು ಮಾಡಿದ್ದ ದೊಡ್ಡ ತಪ್ಪು. ಈಗ ಸುಮ್ಮನಿರುವುದಿಲ್ಲ. ಕಮಿಷನರ್‌ಗೆ ದೂರು ನೀಡಿದ್ದೇನೆ. ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ’ ಎಂದು ಸುಮಲತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.