ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳ ಅಕ್ರಮ ಹಂಚಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಅನುಮತಿ ನೀಡಿಕೆಗೆ ಸಮ್ಮತಿ ಮುದ್ರೆ ಒತ್ತಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಸಿದ್ದರಾಮಯ್ಯ ಮತ್ತು ಜೆ.ದೇವರಾಜು ಸಲ್ಲಿಸಿರುವ ಮೇಲ್ಮನವಿಯನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ನವೆಂಬರ್ ಎರಡನೇ ವಾರಕ್ಕೆ ಮುಂದೂಡಿದೆ.
ಈ ಸಂಬಂಧ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಸಿದ್ದರಾಮಯ್ಯ ಮತ್ತು ಜೆ.ದೇವರಾಜು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನ್ಯಾಯಮೂರ್ತಿ ಅನು ಶಿವರಾಮನ್ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ಗುರುವಾರ ವಿಚಾರಣೆಗೆ ನಿಗದಿಯಾಗಿತ್ತು.
ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ‘ಈ ಮೇಲ್ಮನವಿಗಳನ್ನು ಅಂತಿಮ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಮತ್ತು ಇನ್ನಷ್ಟು ಸಮಯಾವಕಾಶದ ಅಗತ್ಯವಿದೆ’ ಎಂದೂ ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ನವೆಂಬರ್ ಎರಡನೇ ವಾರಕ್ಕೆ ಮುಂದೂಡಿತು.
ಮೇಲ್ಮನವಿಗಳು: ಮುಡಾ ಪ್ರಕರಣದ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ 2024ರ ಸೆಪ್ಟೆಂಬರ್ 24ರಂದು ವಜಾಗೊಳಿಸಿತ್ತು. ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದಿತ್ತು.
ಸೆಣಬು ಬಳಕೆ: ಸಕ್ಕರೆ ಕಾರ್ಖಾನೆ ಅರ್ಜಿಗಳ ವಜಾ
ಸಕ್ಕರೆಯನ್ನು ಪ್ಯಾಕ್ ಮಾಡಲು ಸೆಣಬಿನ ಚೀಲಗಳನ್ನೇ ಕಡ್ಡಾಯವಾಗಿ ಬಳಸಬೇಕೆಂಬ ಕೇಂದ್ರ ಸರ್ಕಾರದ ಅಧಿಸೂಚನೆ ರದ್ದುಗೊಳಿಸುವಂತೆ ಕೋರಲಾಗಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಸಂಬಂಧ ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಸಂಘ ಕರ್ನಾಟಕ (ಸಿಸ್ಮಾ ಕೆ) ಪ್ರತಿನಿಧಿ ಶಂಕರಯ್ಯ ಸಾಲಿಮಠ ಮತ್ತು ಭಾರತೀಯ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಂಘದ (ಇಸ್ಮಾ) ಪ್ರತಿನಿಧಿ ಭಾರತಿ ಬಾಲಾಜಿ ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಸೆಣಬಿನ ಬ್ಯಾಚಿಂಗ್ ಎಣ್ಣೆಯು ಗಂಭೀರ ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆಯೇ ಹೇಗೆ ಎಂಬುದನ್ನು ಪರಿಶೀಲಿಸುವುದು ಸ್ಥಾಯಿ ಸಲಹಾ ಸಮಿತಿಯ ಕರ್ತವ್ಯವೇ ಹೊರತು ನ್ಯಾಯಾಲಯದ್ದಲ್ಲ’ ಎಂದು ನ್ಯಾಯಪೀಠ ಹೇಳಿದೆ.
ಸಕ್ಕರೆ ಪ್ಯಾಕಿಂಗ್‌ಗೆ ಶೇ 20ರಷ್ಟು ಸೆಣಬಿನ ಚೀಲ ಬಳಸುವುದನ್ನು ಕಡ್ಡಾಯಗೊಳಿಸಲಾದ ‘ಪ್ಯಾಕಿಂಗ್ ಮಾಡಲಾಗುವ ಸರಕುಗಳಲ್ಲಿ ಕಡ್ಡಾಯವಾಗಿ ಬಳಸುವ ಸಾಮಗ್ರಿಗಳ ಕಾಯ್ದೆ–1987’ರ ಅಡಿಯಲ್ಲಿ ಜವಳಿ ಸಚಿವಾಲಯ ಹೊರಡಿಸಿದ ಅಧಿಸೂಚನೆಗಳನ್ನು ಸಂಘಗಳು ಪ್ರಶ್ನಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.