ADVERTISEMENT

ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣ: ಮರೀಗೌಡ ಆಸ್ತಿ ಮುಟ್ಟುಗೋಲು

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 23:30 IST
Last Updated 22 ಜನವರಿ 2026, 23:30 IST
ಕೆ.ಮರೀಗೌಡ
ಕೆ.ಮರೀಗೌಡ   

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿದ್ದ ಪ್ರಕರಣದಲ್ಲಿ, ಪ್ರಾಧಿಕಾರದ ಹಿಂದಿನ ಅಧ್ಯಕ್ಷರಾಗಿದ್ದ ಕೆ.ಮರೀಗೌಡ ಅವರ ₹20.85 ಕೋಟಿ ಮೌಲ್ಯದ 10 ಸ್ವತ್ತುಗಳನ್ನು ಜಾರಿ ನಿರ್ದೇಶನಾಲಯವು ಮುಟ್ಟುಗೋಲು ಹಾಕಿಕೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಯವರು ಕಳೆದುಕೊಂಡ ಭೂಮಿಗೆ ಪರಿಹಾರಾತ್ಮಕವಾಗಿ 14 ನಿವೇಶನಗಳನ್ನು ನೀಡಿದ್ದ ಪ್ರಕರಣದ ತನಿಖೆ ಆರಂಭಿಸಿದ್ದ ಇ.ಡಿ, 1,000ಕ್ಕೂ ಹೆಚ್ಚು ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವುದನ್ನು ಪತ್ತೆ ಮಾಡಿತ್ತು. ಈ ಅಕ್ರಮಗಳು ನಡೆದಿದ್ದ ಅವಧಿಯಲ್ಲಿ ಜಿ.ಟಿ.ದಿನೇಶ್‌ಕುಮಾರ್ ಅವರು ಮುಡಾ ಆಯುಕ್ತರಾಗಿದ್ದರು ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ತಿಳಿಸಿದೆ.

ಈ ಪ್ರಕರಣ ದಾಖಲಾದ ಸಂದರ್ಭದಲ್ಲಿ ಮರೀಗೌಡ ಅವರು ಮುಡಾ ಅಧ್ಯಕ್ಷರಾಗಿದ್ದರು. ತನಿಖೆ ತೀವ್ರಗೊಂಡ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ADVERTISEMENT

‘ಮುಡಾವು ದಶಕಗಳ ಹಿಂದೆ ಸ್ವಾಧೀನಪಡಿಸಿಕೊಂಡಿದ್ದ ಜಮೀನಿಗೆ ಪರಿಹಾರ ನೀಡದಿದ್ದ ಮತ್ತು ಪರಿಹಾರದ ನಿವೇಶನಗಳು ಹಂಚಿಕೆ ಆಗದೇ ಇರುವ ಪ್ರಕರಣಗಳನ್ನೇ ಅಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಮೂಲ ಮಾಲೀಕರಿಂದ ಜಿಪಿಎ ಮಾಡಿಸಿಕೊಂಡು, ಮುಡಾಕ್ಕೆ ಪರಿಹಾರ ಅರ್ಜಿ ಸಲ್ಲಿಸುತ್ತಿದ್ದರು. ಮುಡಾವು ಅದಕ್ಕೆ ನಿವೇಶನಗಳನ್ನು ಹಂಚಿಕೆ ಮಾಡುತ್ತಿತ್ತು. ಮರೀಗೌಡ ಅವರು ಸಹ ದಿನೇಶ್‌ಕುಮಾರ್ ಅವರ ಅವಧಿಯಲ್ಲಿ ಈ ರೀತಿ ಹಲವು ನಿವೇಶನಗಳನ್ನು ಪಡೆದುಕೊಂಡಿದ್ದರು. ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದು ಇ.ಡಿ ವಿವರಿಸಿದೆ.

ಏನೆಲ್ಲಾ ಮುಟ್ಟುಗೋಲು: ಮರೀಗೌಡ ಮತ್ತು ಕುಟುಂಬದವರ ಹೆಸರಿನಲ್ಲಿನ ಆರು ನಿವೇಶನ, ಮೈಸೂರಿನ ವಿವಿಧೆಡೆ ಇರುವ ಮೂರು ಕೃಷಿ ಜಮೀನು, ಮೈಸೂರು ನಗರದಲ್ಲಿನ ಒಂದು ವಾಣಿಜ್ಯ ಸಂಕೀರ್ಣ

ಏನೆಲ್ಲಾ ಮುಟ್ಟುಗೋಲು...

* ಮರೀಗೌಡ ಮತ್ತು ಕುಟುಂಬದವರ ಹೆಸರಿನಲ್ಲಿನ ಆರು ನಿವೇಶನ

* ಮೈಸೂರಿನ ವಿವಿಧೆಡೆ ಇರುವ 3 ಕೃಷಿ ಜಮೀನು

* ಮೈಸೂರು ನಗರದಲ್ಲಿನ ಒಂದು ವಾಣಿಜ್ಯ ಸಂಕೀರ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.