ADVERTISEMENT

MUDA: ಸಿದ್ದರಾಮಯ್ಯ ಪತ್ನಿಗೆ ನಿವೇಶನ ಹಂಚಿಕೆ ಪ್ರಕರಣ; ಕುಮಾರ ನಾಯಕರದ್ದೇ ಲೋಪ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 22:17 IST
Last Updated 24 ಫೆಬ್ರುವರಿ 2025, 22:17 IST
ಜಿ. ಕುಮಾರ್‌ ನಾಯಕ್
ಜಿ. ಕುಮಾರ್‌ ನಾಯಕ್   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ ಪರಿಹಾರ ರೂಪದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ನಿವೇಶನಗಳನ್ನು ಹಂಚಿಕೆ ಮಾಡಿದ ಪ್ರಕರಣದಲ್ಲಿ, ಅಂದಿನ ಮೈಸೂರು ಜಿಲ್ಲಾಧಿಕಾರಿ, ಈಗಿನ ರಾಯಚೂರು ಕ್ಷೇತ್ರದ ಕಾಂಗ್ರೆಸ್‌ ಸಂಸದ ಜಿ.ಕುಮಾರ ನಾಯಕ ಅವರು ಕರ್ತವ್ಯಲೋಪ ಎಸಗಿದ್ದಾರೆ ಎಂದು ಲೋಕಾಯುಕ್ತ ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ವರದಿಯಲ್ಲಿ, ಕುಮಾರ ನಾಯಕ ಅವರ ಲೋಪವನ್ನು ಬೊಟ್ಟು ಮಾಡಲಾಗಿದ್ದು, ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದೂ ಹೇಳಿದೆ. 

ಸಿದ್ದರಾಮಯ್ಯ, ಪಾರ್ವತಿ, ಪಾರ್ವತಿ ಅವರ ಸೋದರ ಮಲ್ಲಿಕಾರ್ಜುನಸ್ವಾಮಿ, ಜಮೀನಿನ ಮಾಲೀಕ ದೇವರಾಜು ಮತ್ತು ಸಿದ್ದರಾಮಯ್ಯ ಅವರ ಮಗ ಯತೀಂದ್ರ ಅವರ ವಿರುದ್ಧದ ಯಾವ ಆರೋಪಗಳೂ ಸಾಬೀತಾಗಿಲ್ಲ ಎಂದಿರುವ ಲೋಕಾಯುಕ್ತವು, ಅಧಿಕಾರಿಗಳಿಂದಲೇ ಎಲ್ಲ ತಪ್ಪುಗಳಾಗಿವೆ ಎಂದು ಆರೋಪಿಸಿದೆ.

ADVERTISEMENT

ಕೆಸರೆ ಗ್ರಾಮ ವಿವಾದಿತ ಸರ್ವೆ ಸಂಖ್ಯೆ: 464ರ 3 ಎಕರೆ 16 ಗುಂಟೆ ಜಮೀನಿನ ಭೂಬಳಕೆ ಪರಿವರ್ತನೆಗೆ 2004–05ರಲ್ಲಿ ಮಲ್ಲಿಕಾರ್ಜುನಸ್ವಾಮಿ ಅರ್ಜಿ ಸಲ್ಲಿಸಿದಾಗ, ಕುಮಾರ ನಾಯಕ ಅವರು ಮೈಸೂರು ಜಿಲ್ಲಾಧಿಕಾರಿ ಆಗಿದ್ದರು. ಆ ಅವಧಿಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆಯೇ ವರದಿ ಸಲ್ಲಿಸಿದ್ದಾರೆ ಎಂದು ಲೋಕಾಯುಕ್ತ ಹೇಳಿದೆ.

ಜಮೀನಿನ ಸ್ಥಳ ಪರಿಶೀಲನೆ ನಡೆಸಬೇಕಿತ್ತು. ಬದಲಿಗೆ ಅಧಿಕಾರಿಗಳು ಕೆಸರೆ ಗ್ರಾಮದ ನಕ್ಷೆ, ಭೂಸ್ವಾಧೀನ ಸಂಬಂಧಿ ನಕ್ಷೆ, ಬಡಾವಣೆ ಅಭಿವೃದ್ಧಿ ನಕ್ಷೆಗಳನ್ನು ಬಳಸಿಕೊಂಡು ಸ್ಥಳ ಪರಿಶೀಲನೆ ವರದಿ ಸಿದ್ಧಪಡಿಸಿದ್ದಾರೆ. ಈ ನಕ್ಷೆಗಳಲ್ಲಿ ಸರ್ವೆ ಸಂಖ್ಯೆ 464ರ ಜಮೀನು ಖಾಲಿ ಎಂದೇ ನಮೂದಾಗಿದೆ. ಹೀಗಾಗಿ ಜಮೀನಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ವರದಿ ನೀಡಿದ್ದಾರೆ ಎಂದು ಉಲ್ಲೇಖಿಸಿದೆ.

‘ಅಧೀನ ಅಧಿಕಾರಿಗಳು ನೀಡಿದ ಸ್ಥಳ ಪರಿಶೀಲನಾ ವರದಿಯನ್ನು ಕುಮಾರ ನಾಯಕ ಅನುಮೋದಿಸಿದ್ದಾರೆ. ವರದಿ ಖಾತರಿಪಡಿಸಿಕೊಳ್ಳದೇ ಭೂಪರಿವರ್ತನೆಗೆ ಆದೇಶಿಸಿದ್ದಾರೆ. ಇದು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪಕ್ಕೆ ಹಿಡಿದ ಕೈಗನ್ನಡಿ. ಆದರೆ, ಅವರು ಭೂಮಾಲೀಕರ ಜತೆ ಸೇರಿಕೊಂಡು ಅಕ್ರಮ ಎಸಗಿದ್ದಾರೆ, ಉದ್ದೇಶಪೂರ್ವಕವಾಗಿ ಸುಳ್ಳು ವರದಿ ನೀಡಿದ್ದಾರೆ ಎಂಬುದು ಸಾಬೀತಾಗುವುದಿಲ್ಲ. ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ಮತ್ತು ಇಲಾಖಾ ಶಿಸ್ತುಕ್ರಮ ತೆಗೆದುಕೊಳ್ಳಬೇಕು’ ಎಂದು ಶಿಫಾರಸು ಮಾಡಿದೆ.

ತಮ್ಮಿಂದ ಕರ್ತವ್ಯಲೋಪವಾಗಿದೆ ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಿರುವ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಂಸದ ಕುಮಾರ ನಾಯಕ ಅವರಿಗೆ ಮೂರು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಅವರಿಗೆ ಕಳುಹಿಸಲಾದ ಎರಡು ಸಂದೇಶಕ್ಕೂ ಪ್ರತಿಕ್ರಿಯೆ ನೀಡಲಿಲ್ಲ.

ಯಾವೆಲ್ಲಾ ಅಧಿಕಾರಿಗಳಿಂದ ಲೋಪ

  1. ಜಿ.ಕುಮಾರ ನಾಯಕ ಹಿಂದಿನ ಜಿಲ್ಲಾಧಿಕಾರಿ ಮೈಸೂರು (ನಿವೃತ್ತ)

  2. ಮಾಳಿಗ ಶಂಕರ್‌ ಹಿಂದಿನ ತಹಶೀಲ್ದಾರ್‌ ಮೈಸೂರು ತಾಲ್ಲೂಕು (ನಿವೃತ್ತ)

  3. ಸಿದ್ದಪ್ಪಾಜಿ ರೆವಿನ್ಯೂ ಇನ್‌ಸ್ಪೆಕ್ಟರ್‌ ಮೈಸೂರು ತಾಲ್ಲೂಕು ಕಚೇರಿ (ನಿವೃತ್ತ)

  4. ಶಂಕರಪ್ಪ ಭೂಮಾಪಕ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಮೈಸೂರು ತಾಲ್ಲೂಕು

    ________

    ಜಿ.ಕುಮಾರ ನಾಯಕ ಅವರು ಐಎಎಸ್‌ ಅಧಿಕಾರಿಯಾಗಿ ನಿವೃತ್ತಿಯಾಗದ್ದು ಅವರಿಗೆ ಅಖಿಲ ಭಾರತ (ಶಿಸ್ತು ನಡಾವಳಿಗಳು) ಮತ್ತು ಸೇವಾ (ಶಿಸ್ತು ಪಾಲನಾ ನಡಾವಳಿಗಳು) ನಿಯಮಗಳು ಅನ್ವಯಿಸುತ್ತವೆ. ಕರ್ತವ್ಯಲೋಪ ನಡೆದು 19 ವರ್ಷಗಳಾಗಿವೆ. ಹೀಗಾಗಿ ಶಿಸ್ತು ಕ್ರಮದ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳಬಹುದಾಗಿರುತ್ತದೆ.

₹700 ಕೋಟಿಗೂ ಹೆಚ್ಚು ನಷ್ಟ

ಭೂಸ್ವಾಧೀನಪಡಿಸಿಕೊಳ್ಳದೇ ರೈತರ ಜಮೀನನ್ನು ಮುಡಾ ಬಳಕೆ ಮಾಡಿಕೊಂಡ ಪ್ರಕರಣಗಳಲ್ಲಿ ಸರ್ಕಾರಕ್ಕೆ ₹700 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಲೋಕಾಯುಕ್ತವು ಹೇಳಿದೆ. ಇಂತಹ ಪ್ರಕರಣಗಳಲ್ಲಿ ಮುಡಾವು 2016–2022ರ ಅವಧಿಯಲ್ಲಿ 50:50ರ ಅನುಪಾತದಲ್ಲಿ ಅಕ್ರಮವಾಗಿ 1095 ನಿವೇಶನಗಳನ್ನು ಪರಿಹಾರವಾಗಿ ನೀಡಿದೆ. ಆದರೆ ಇವು ಭೂಮಾಲೀಕರು ಅಥವಾ ವಾರಸುದಾರರಿಗೆ ಸಿಗದೆ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಮತ್ತು ಪ್ರಭಾವಿಗಳ ಪಾಲಾಗಿವೆ ಎಂದು ಹೇಳಿದೆ.

ಮುಡಾ ಆಯುಕ್ತರಾಗಿದ್ದ ದಿನೇಶ್‌ ಕುಮಾರ್ ಅವರು ಇದರಲ್ಲಿ ಭಾಗಿಯಾಗಿದ್ದಾರೆ. 50:50ರ ಅನುಪಾತದ ಪರಿಹಾರ ನಿಯಮವನ್ನು ಸರ್ಕಾರ ರದ್ದುಪಡಿಸಿದ ನಂತರವೂ ದಿನೇಶ್‌ ಕುಮಾರ್‌ ಮತ್ತು ಮುಡಾದ ಹಿಂದಿನ ಅಧ್ಯಕ್ಷ ಕೆ.ಮರೀಗೌಡ ಅವರ ಮೌಖಿಕ ಆದೇಶದಂತೆ 252 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.