ADVERTISEMENT

‘ಮೈತ್ರಿ’ ‍‍ಪಾದಯಾತ್ರೆಗೆ ‘ದಳ’ ವಿಘ್ನ

ಜನರು ಸಂಕಷ್ಟದಲ್ಲಿದ್ದಾರೆ; ಯಾತ್ರೆ ಮುಂದೂಡಲಿ: ಜಿ.ಟಿ. ದೇವೇಗೌಡ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 0:20 IST
Last Updated 31 ಜುಲೈ 2024, 0:20 IST
<div class="paragraphs"><p> ಜೆಡಿಎಸ್‌- ಬಿಜೆಪಿ</p></div>

ಜೆಡಿಎಸ್‌- ಬಿಜೆಪಿ

   

ಬೆಂಗಳೂರು: ‘ಮುಡಾ’ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು, ಇದರ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಬಿಜೆಪಿ–ಜೆಡಿಎಸ್‌ ನಡೆಸಲು ಉದ್ದೇಶಿಸಿದ್ದ ಬೆಂಗಳೂರು–ಮೈಸೂರು ಪಾದಯಾತ್ರೆಯ ಆರಂಭಕ್ಕೂ ಮುನ್ನವೇ ವಿಘ್ನ ಎದುರಾಗಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಎಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಎರಡೂ ಪಕ್ಷಗಳ ಮುಖಂಡರು ಸಭೆಗಳನ್ನು ನಡೆಸಿದ್ದರು. ಅದಾದ ಬಳಿಕ, ಆ.3ರಿಂದ ಪಾದಯಾತ್ರೆ ಆರಂಭಿಸುವುದಾಗಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಿದ್ದರು. 

ADVERTISEMENT

ತೀರ್ಮಾನ ಕೈಗೊಂಡ ಎರಡೇ ದಿನದಲ್ಲಿ ತನ್ನ ನಿರ್ಧಾರದಿಂದ ಹಿಂದೆ ಸರಿದಿರುವ ಜೆಡಿಎಸ್‌, ಪಾದಯಾತ್ರೆಯನ್ನು ಮುಂದೂಡುವಂತೆ ಮಿತ್ರ ಪಕ್ಷ ಬಿಜೆಪಿಗೆ ಮನವಿ ಮಾಡಿದೆ.

‘ಮುಡಾ’ ನಿವೇಶನ ಹಂಚಿಕೆಯ ಫಲಾನುಭವಿಗಳಲ್ಲಿ ಜೆಡಿಎಸ್‌ನ ಹಲವು ನಾಯಕರೂ ಇದ್ದಾರೆ. ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಬಿಜೆಪಿಗಿಂತ ಜೆಡಿಎಸ್‌ ನಾಯಕರ ಪಟ್ಟಿಯೇ ದೊಡ್ಡದಿತ್ತು. ಈ ಎಲ್ಲ ಕಾರಣಗಳಿಂದ ಪಾದಯಾತ್ರೆಯಲ್ಲಿ ಭಾಗವಹಿಸದಂತೆ ಪಕ್ಷದ ಒಳಗೆ ಒತ್ತಡವೂ ಇದೆ. ಹಾಗಾಗಿಯೇ ದಿಢೀರ್‌ ಸಭೆ ಕರೆದು ಮುಂದೂಡವಂತೆ ಕೋರಲಾಗುತ್ತಿದೆ’ ಎಂಬ ಚರ್ಚೆ ಜೆಡಿಎಸ್ ವಲಯದಲ್ಲೇ ನಡೆದಿದೆ.

ಬೆಂಗಳೂರಿನಲ್ಲಿ ಮಂಗಳವಾರ ನಡೆದ ಜೆಡಿಎಸ್‌ ಪ್ರಮುಖರ ಸಮಿತಿಯ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಜಿ.ಟಿ. ದೇವೇಗೌಡ, ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನರು ಸಂಕಷ್ಟದಲ್ಲಿ ಇದ್ದಾರೆ. ಗುಡ್ಡ ಕುಸಿತ, ನೆರೆಯಿಂದಾಗಿ ಹಲವು ಜನರು ಮೃತಪಟ್ಟಿದ್ದಾರೆ. ಮೈಸೂರು–ಬೆಂಗಳೂರು ನಡುವಿನ ಜಿಲ್ಲೆಗಳಾದ ಮಂಡ್ಯ, ರಾಮನಗರ ಮತ್ತಿತರ ಭಾಗಗಳಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಲು ಸಾಧ್ಯವಾಗದು ಎಂದು ಹಲವು ಮುಖಂಡರು ಅಭಿಪ್ರಾಯ ತಿಳಿಸಿದ್ದಾರೆ. ಹಾಗಾಗಿ, ಪಾದಯಾತ್ರೆ ಮುಂದೂಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದರು.

ಸಂಸತ್‌ ಅಧಿವೇಶನದ ಕಾರಣ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಅವರಿಲ್ಲದೆ ಪಾದಯಾತ್ರೆ ಯಶಸ್ವಿಯಾಗದು ಎನ್ನುವುದು ಬಹುತೇಕ ಕಾರ್ಯಕರ್ತರ ಅಭಿಪ್ರಾಯ. ಕುಮಾರಸ್ವಾಮಿ ಅವರು ಪಾದಯಾತ್ರೆ ಮಾಡದಿದ್ದರೂ, ಕಾರಿನಲ್ಲೇ ಬಂದು ಪ್ರತಿ ಸ್ಥಳದಲ್ಲೂ ಮಾತನಾಡಲು ಎಲ್ಲ ಮುಖಂಡರು ಕೋರಿದ್ದಾರೆ. ಈ ಎಲ್ಲ ಕಾರಣಗಳಿಂದ ಒಂದು ವಾರವಾದರೂ ಪಾದಯಾತ್ರೆ ಮುಂದೂಡಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಲು ಪಕ್ಷದ ಪ್ರಮುಖರ ಸಮಿತಿಯಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಈ ನಿರ್ಧಾರ ಪಾದಯಾತ್ರೆಯ ಬಗ್ಗೆ ಅಪಸ್ವರವಲ್ಲ. ವಾಲ್ಮೀಕಿ ನಿಗಮ, ಮುಡಾ ಹಗರಣ ಸೇರಿದಂತೆ ರಾಜ್ಯ ಸರ್ಕಾರದ ಎಲ್ಲ ಭ್ರಷ್ಟಾಚಾರದ ವಿರುದ್ಧ ಜೆಡಿಎಸ್‌–ಬಿಜೆಪಿ ಜಂಟಿ ಹೋರಾಟ ಮುಂದುವರಿಯಲಿದೆ. ಸದನದ ಒಳಗೂ ಸಾಥ್‌ ನೀಡಿದ ರೀತಿ ಹೊರಗೂ ಇರುತ್ತದೆ. ಸಂಕಷ್ಟದ ಸಮಯದಲ್ಲಿ ಮುಂದೂಡಲಷ್ಟೇ ಪಕ್ಷದ ಮನವಿ ಎಂದರು.

ಬಿಜೆಪಿಯಲ್ಲೂ ಅಪಸ್ವರ

‘ಮೈಸೂರು ಚಲೋ’ ಪಾದಯಾತ್ರೆಗೆ ಬಿಜೆಪಿಯಲ್ಲೂ ಅಪಸ್ವರ ಎದ್ದಿದೆ. ರಾಜ್ಯವ್ಯಾಪಿ ಮಳೆ ಸುರಿಯುತ್ತಿರುವಾಗ ಮತ್ತು ಜನ ಸಂಕಷ್ಟದಲ್ಲಿರುವಾಗ ಪಾದಯಾತ್ರೆ ನಡೆಸುವ ಅಗತ್ಯವಿದೆಯೇ ಎಂಬುದು ಒಂದು ಕಾರಣವಾದರೆ, ಪಾದಯಾತ್ರೆ ಘೋಷಿಸುವುದಕ್ಕೂ ಮುನ್ನ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಯಾರ ಜೊತೆಗೂ ಚರ್ಚಿಸಲಿಲ್ಲ ಎನ್ನುವುದೂ ಈಗ ಪಕ್ಷದ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಅಧಿವೇಶನದ ಸಂದರ್ಭದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿರಲಿಲ್ಲ. ಅಧಿವೇಶನ ಮುಗಿದ ಬಳಿಕ ಪಾದಯಾತ್ರೆ ನಡೆಸುವ ವಿಚಾರವನ್ನು ತಿಳಿಸಿದ್ದು ಸರಿಯಲ್ಲ ಎಂಬ ತಕರಾರು ಎದ್ದಿದೆ. ಈ ಮಧ್ಯೆ ‘ಮೈಸೂರು ಚಲೋ’ಗೆ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ ಬಂಡಾಯ ಸಾರಿದ್ದಾರೆ.

ಸಿದ್ದರಾಮಯ್ಯ ಹೆಸರು ಹೇಳದ ಜಿಟಿಡಿ

ಮುಡಾ ಹಗರಣದ ವಿರುದ್ಧ ಹಮ್ಮಿಕೊಂಡಿರುವ ಪಾದಯಾತ್ರೆ ಮುಂದೂಡುವ ಕುರಿತು ನಡೆದ ಸಭೆಯ ನಂತರ ಮಾತನಾಡಿದ ಜೆಡಿಎಸ್‌ ಉನ್ನತ ನಾಯಕರ ಸಮಿತಿ ಅಧ್ಯಕ್ಷ ಜಿ.ಟಿ. ದೇವಗೌಡ, ಅಪ್ಪಿತಪ್ಪಿಯೂ ಸಿದ್ದರಾಮಯ್ಯ ಹೆಸರು ಹೇಳಲಿಲ್ಲ. ಮಾತಿನ ಉದ್ದಕ್ಕೂ ಮುಖ್ಯಮಂತ್ರಿ ಎಂದಷ್ಟೇ ಸಂಬೋಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.