ADVERTISEMENT

70 ಗ್ರಾಂ ಚಿನ್ನಕ್ಕಾಗಿ ದೊಡ್ಡಮ್ಮನ ಹತ್ಯೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 20:45 IST
Last Updated 9 ಮಾರ್ಚ್ 2021, 20:45 IST

ಬೆಂಗಳೂರು: ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ದಿಲ್ಶಾನ್‌ ಬಾನು (62) ಹತ್ಯೆ ಪ್ರಕರಣ ಭೇದಿಸಿರುವ ಪೊಲೀಸರು, ಶಬಾನಾ ಬಾನು (29) ಎಂಬಾಕೆಯನ್ನು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಯಾದ ಶಬಾನಾ ಬಾನು, ಕೊಲೆಯಾದ ದಿಲ್ಶಾನ್ ಅವರ ತಂಗಿಯ ಮಗಳು. ಚಿನ್ನಾಭರಣಕ್ಕಾಗಿ ಆಕೆ ಕೃತ್ಯ ಎಸಗಿದ್ದಳು. ಆಕೆಯನ್ನು ಬಂಧಿಸಿ, 70 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆನೆಪಾಳ್ಯದ ನಿವಾಸಿ ದಿಲ್ಶಾನ್ ಬಾನು, ಮಗನ ಜೊತೆ ವಾಸವಿದ್ದರು. ಮಾ. 4ರಂದು ಬೆಳಿಗ್ಗೆ ಮಗ ಕೆಲಸಕ್ಕೆ ಹೋಗಿದ್ದರು. ಅದೇ ವೇಳೆಯೇ ಮನೆಗೆ ಬಂದಿದ್ದ ಆರೋಪಿ ಶಬಾನಾ, ಕತ್ತು ಹಿಸುಕಿ ಕೊಂದಿದ್ದರು. ನಂತರ ಮೈ ಮೇಲೆ ಹಾಗೂ ಮನೆಯಲ್ಲಿದ್ದ ಚಿನ್ನಾಭರಣ ತೆಗೆದುಕೊಂಡು ಪರಾರಿಯಾಗಿದ್ದಳು.’

ADVERTISEMENT

‘ಟೆಂಪೊ ಚಾಲಕನಾಗಿದ್ದ ಮಗ, ಕೆಲಸ ಮುಗಿಸಿ ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದಿದ್ದರು. ಅವಾಗಲೇ ತಾಯಿ ಮೃತದೇಹ ಕಂಡಿತ್ತು. ಬಳಿಕ ದೂರು ನೀಡಿದ್ದರು’ ಎಂದೂ ಪೊಲೀಸರು ತಿಳಿಸಿದರು.

‘ಮನೆಗಳಲ್ಲಿ ಕೆಲಸ ಮಾಡುತ್ತಿದ್ದ ಶಬಾನಾ, ಆರ್ಥಿಕ ತೊಂದರೆಗೆ ಸಿಲುಕಿದ್ದಳು. ದೊಡ್ಡಮ್ಮನ ಮನೆಯಲ್ಲಿ ಚಿನ್ನಾಭರಣವಿದ್ದ ಮಾಹಿತಿ ಗೊತ್ತಿದ್ದರಿಂದ, ಅವರನ್ನೇ ಕೊಂದು ಚಿನ್ನಾಭರಣ ಕಳವು ಮಾಡಲು ತೀರ್ಮಾನಿಸಿ ಕೃತ್ಯ ಎಸಗಿದ್ದಳು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.