ADVERTISEMENT

ಪಂಚಮಸಾಲಿ ಸಮಾವೇಶವನ್ನು ವಿಫಲಗೊಳಿಸುವ ಯತ್ನ: ವಿಜಯೇಂದ್ರ ವಿರುದ್ಧ ಯತ್ನಾಳ ಆರೋಪ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 10:51 IST
Last Updated 14 ಫೆಬ್ರುವರಿ 2021, 10:51 IST
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ   

ತುಮಕೂರು: ‘ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಬಿಜೆಪಿ ಮುಖಂಡರು ನೋಟಿಸ್ ಕೊಟ್ಟಿರುವುದಾಗಿ ಹೇಳುತ್ತಿದ್ದಾರೆ. ಆದರೆ ಈವರೆಗೂ ನನಗೆ ನೋಟಿಸ್ ಬಂದಿಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭಾನುವಾರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ನನಗೆ ನೋಟಿಸ್ ಬಂದಿರುವುದು ಪಕ್ಷದ ಉಪಾಧ್ಯಕ್ಷ ವಿಜಯೇಂದ್ರ ಅವರಿಗೆ ಹೇಗೆ ಗೊತ್ತಾಯಿತು’ ಎಂದು ಪ್ರಶ್ನಿಸಿದರು. ಯಾರ ಬಳಿಯೂ ನೋಟಿಸ್ ಪತ್ರ ಇಲ್ಲ. ನೋಟಿಸ್ ನೀಡಿರುವುದಾಗಿ ಹೇಳಿಕೆ ನೀಡಿ ಮೂರು ದಿನವಾಗಿದೆ. ಎಲ್ಲಿಯೂ ನೋಟಿಸ್ ಕಾಣಿಸುತ್ತಿಲ್ಲ ಎಂದು ವ್ಯಂಗ್ಯವಾಡಿದರು.

‘ಹೆದರಿಸುವ ಸಲುವಾಗಿ ನೋಟಿಸ್ ಕೊಡಲಾಗಿದೆ. ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ ಎಂದು ಸಚಿವರೊಬ್ಬರು ದೂರವಾಣಿ ಕರೆಮಾಡಿ ನನಗೆ ಹೇಳಿದ್ದಾರೆ. ಫೆ. 21ರ ನಂತರ ಕೇಂದ್ರ ನಾಯಕರು ನೋಟಿಸ್ ವಾಪಸ್ ಪಡೆಯುವುದಾಗಿ ಅವರು ತಿಳಿಸಿದ್ದಾರೆ. ಯಾರ ಬೆದರಿಕೆಗೂ ಅಂಜುವುದಿಲ್ಲ’ ಎಂದು ತಮ್ಮದೇ ಧಾಟಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಗುಡುಗಿದರು.

ADVERTISEMENT

‘ವೀರಶೈವ ಲಿಂಗಾಯತ ಸ್ವಾಮೀಜಿಗಳು ಬೆಂಗಳೂರಿನಲ್ಲಿ ಸಭೆ ನಡೆಸಿ ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ. ಯಾರೋ ಒಬ್ಬರು ವೀರಶೈವ ಲಿಂಗಾಯತ ಸಮುದಾಯವನ್ನು ಹೈಜಾಕ್ ಮಾಡುವ ಉದ್ದೇಶವನ್ನು ಸ್ವಾಮೀಜಿಗಳು ಮನಗಂಡಿದ್ದಾರೆ. ಸಮುದಾಯವನ್ನು ತಮ್ಮ ಮಗನ ರಾಜಕೀಯ ಬೆಳವಣಿಗೆಗಾಗಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

ಸಚಿವ ಮುರುಗೇಶ ನಿರಾಣಿ, ವಿಜಯೇಂದ್ರ ಸೇರಿ ಪಂಚಮಸಾಲಿ ಸಮುದಾಯ ಒಡೆಯುವ ಪ್ರಯತ್ನ ನಡೆಸಿದ್ದಾರೆ.‌ ಫೆ. 21ರಂದು ಬೆಂಗಳೂರಿನಲ್ಲಿ ನಡೆಯುವ ಸಮಾವೇಶ ಹಾಳುಮಾಡಿ, ವಿಫಲಗೊಳಿಸುವ ಷಡ್ಯಂತ್ರ ನಡೆದಿದೆ. ಆದರೆ ರಾಜ್ಯದ ಮೂಲೆ ಮೂಲೆಯಿಂದ ಪಂಚಮಸಾಲಿಗರು ಬರಲಿದ್ದಾರೆ ಎಂದರು.

ಐಎಎಸ್ ಅಧಿಕಾರಿಗಳ ವ್ಯಾಪಾರ

ರಾಜ್ಯದಲ್ಲಿ ಯಾರು ರಾಜಾಹುಲಿ ಆಗುತ್ತಾರೋ; ಯಾರು ಬೆಟ್ಟದ ಇಲಿ ಆಗುತ್ತಾರೋ ಗೊತ್ತಿಲ್ಲ. ಲೂಟಿ ಹೊಡೆದ ಹಣದಿಂದ ಕುತಂತ್ರಗಳು ನಡೆಯುತ್ತಿವೆ. ಐಎಎಸ್ ಅಧಿಕಾರಿಗಳ ವರ್ಗಾವಣೆಯಲ್ಲೂ ಹಣದ ಆಟ ಇದೆ. ಹೋಲ್‌ಸೇಲ್ ವ್ಯಾಪಾರದಂತೆ ವರ್ಗಾವಣೆ ಮಾಡಲಾಗಿದೆ. ವಿರೋಧ ಪಕ್ಷಗಳು ಸತ್ತಿದೆ. ಅವರೂ ಇವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.