
ಶಿವಮೂರ್ತಿ ಮುರುಘಾ ಶರಣರು
ಬೆಂಗಳೂರು: ‘ನಮ್ಮ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಪೋಕ್ಸೊ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರು ಹಾಗೂ ಇನ್ನಿಬ್ಬರನ್ನು ಖುಲಾಸೆಗೊಳಿಸಿರುವ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಬೇಕು’ ಎಂದು ಕೋರಿ ಸಂತ್ರಸ್ತ ಬಾಲಕಿಯರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಈ ಕ್ರಿಮಿನಲ್ ಮೇಲ್ಮನವಿಯನ್ನು ಇಬ್ಬರು ಸಂತ್ರಸ್ತ ಬಾಲಕಿಯರು ಬುಧವಾರ ಹೈಕೋರ್ಟ್‌ನಲ್ಲಿ ದಾಖಲು ಮಾಡಿದ್ದಾರೆ. ಅರ್ಜಿಯಲ್ಲಿ ಚಿತ್ರದುರ್ಗ ಗ್ರಾಮೀಣ ಪೊಲೀಸ್ ಠಾಣೆಯನ್ನು ಪ್ರತಿನಿಧಿಸುವ ರಾಜ್ಯ ಪ್ರಾಸಿಕ್ಯೂಷನ್, ಖುಲಾಸೆಗೊಂಡಿರುವ ಆರೋಪಿಗಳಾದ ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು, ಎಸ್.ರಶ್ಮಿ ಮತ್ತು ಎ.ಜೆ.ಪರಮಶಿವಯ್ಯ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
* ಪ್ರಕರಣದ ವಾಸ್ತವಾಂಶಗಳನ್ನು ಪರೀಶಿಲಿಸಿದಾಗ ಮುರುಘಾ ಶರಣರೂ ಸೇರಿದಂತೆ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿರುವುದು ಕಾನೂನಿಗೆ ವಿರುದ್ಧವಾಗಿರುವುದು ವೇದ್ಯವಾಗಿದೆ.
* ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ –2012ರ (ಪೋಕ್ಸೊ) ಅಡಿಯಲ್ಲಿನ ಸ್ಥಾಪಿತ ಕಾನೂನುಗಳು ಹಾಗೂ ಈ ದಿಸೆಯಲ್ಲಿ ಸುಪ್ರೀಂ ಕೋರ್ಟ್ ವಿಧಿಸಿರುವ ಚೌಕಟ್ಟುಗಳ ಪಾಲನೆ ಮಾಡುವಲ್ಲಿ ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಎರಡನೇ ಹೆಚ್ಚುವರಿ ನ್ಯಾಯಾಧೀಶ ಗಂಗಾಧರ ಚನ್ನಬಸಪ್ಪ ಹಡಪದ ಅವರು ಸಂಪೂರ್ಣವಾಗಿ ಎಡವಿದ್ದಾರೆ.
* ಆರೋಪಿಗಳನ್ನು ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 376 (2) (ಎನ್), 376 (3), 323, 504, 506 ಮತ್ತು ಪೋಕ್ಸೊ ಕಾಯ್ದೆಯ ಕಲಂ 5 (ಐ), 6 ಮತ್ತು 17ರ ಅಡಿಯಲ್ಲಿ ಶಿಕ್ಷಿಸದೇ ಖುಲಾಸೆಗೊಳಿಸಿರುವುದು ಸಂತ್ರಸ್ತ ಬಾಲಕಿಯರ ಪಾಲಿಗೆ ನ್ಯಾಯದ ಹತ್ಯೆಯಾಗಿದೆ.
* ದೋಷಾರೋಪ ಪಟ್ಟಿ ಮತ್ತು ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಪರಿಗಣಿಸಿ ಆರೋಪಿಗಳನ್ನು ಅಪರಾಧಿಗಳು ಎಂದು ಕಾನೂನು ಪ್ರಕಾರ ಶಿಕ್ಷಿಸುವಲ್ಲಿ ಸೆಷನ್ಸ್ ನ್ಯಾಯಾಧೀಶರು ವಿಫಲವಾಗಿದ್ದಾರೆ.
* ಯಾವುದೇ ಕೋನದಿಂದ ಗಮನಿಸಿದರೂ, ಈ ಖುಲಾಸೆ ಆದೇಶವು ಕಾನೂನಿನಡಿ ಸಮರ್ಥನೀಯವಲ್ಲ. ಎಲ್ಲ ಆರೋಪಿಗಳನ್ನು ಅಸ್ಪಷ್ಟ ಆಧಾರಗಳ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಹೀಗಾಗಿ, ಸೆಷನ್ಸ್ ನ್ಯಾಯಾಲಯದ ತೀರ್ಪು ಏಕಪಕ್ಷೀಯ, ತಿಳಿವಳಿಕೆ ರಹಿತ ಮತ್ತು ಕಾನೂನು ವಿರೋಧಿ ತೀರ್ಪು ಎನಿಸಿದೆ.
* ಐಪಿಸಿ ಕಲಂ 376 (2) (ಎನ್): ನಿರ್ದಿಷ್ಟ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗುವುದು
* 376 (3): ಹದಿನಾರು ವರ್ಷದ ಕೆಳಗಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗುವುದು
* 323: ಉದ್ದೇಶಪೂರ್ವಕವಾಗಿ ದೈಹಿಕ ನೋವುಂಟು ಮಾಡುವುದು
* 504: ಉದ್ದೇಶಪೂರ್ವಕವಾಗಿ ಅವಮಾನಿಸುವುದು
* 506: ವ್ಯಕ್ತಿಯ ಘನತೆ, ಆಸ್ತಿ, ಅಥವಾ ಆಪ್ತರಿಗೆ ಹಾನಿ ಮಾಡುವ ಕ್ರಿಮಿನಲ್ ಬೆದರಿಕೆ ಮತ್ತು
* ಪೋಕ್ಸೊ ಕಾಯ್ದೆಯ ಕಲಂ 5–6: ಬಲೋರ್ಬಂಧನದ ಮೂಲಕ ಲೈಂಗಿಕ ಆಕ್ರಮಣ ಹಾಗೂ
* ಕಲಂ 17: ಯಾವುದೇ ಅಪರಾಧಕ್ಕೆ ಕುಮ್ಮಕ್ಕು ನೀಡುವುದು, ದುಷ್ಪ್ರೇರಣೆಯ ಪರಿಣಾಮ ಅಪರಾಧ ನಡೆದಿರುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.