ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ
ಹೂವಿನಹಡಗಲಿ (ವಿಜಯನಗರ ಜಿಲ್ಲೆ): 'ತುಂಬಿದ ಕೊಡ ತುಳಕಿತಲೇ ಪರಾಕ್' ಇದು ಈ ವರ್ಷದ ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿ.
ತಾಲ್ಲೂಕಿನ ಐತಿಹಾಸಿಕ ಮೈಲಾರ ಸುಕ್ಷೇತ್ರದಲ್ಲಿ ಶುಕ್ರವಾರ ಸಂಜೆ ಲಕ್ಷಾಂತರ ಭಕ್ತರ ನಡುವೆ ಕಾರಣಿಕ ಮಹೋತ್ಸವ ಜರುಗಿತು.
ದೇವಸ್ಥಾನದ ವಂಶಪಾರಂಪರ್ಯ ದೇವಸ್ಥಾನ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅಶ್ವಾರೂಢರಾಗಿ ಡೆಂಕನ ಮರಡಿಗೆ ಆಗಮಿಸಿ ಕಾರಣಿಕ ಸ್ಥಳದಲ್ಲಿ ಪ್ರದಕ್ಷಿಣೆ ಹಾಕಿದರು. ಈ ಹಿಂದೆ ವಿಜಯನಗರದ ಅರಸರು ಮೈಲಾರಲಿಂಗ ಸ್ವಾಮಿಗೆ ಅರ್ಪಿಸಿದ್ದ ಮೂರ್ತಿಗಳ ಉತ್ಸವದೊಂದಿಗೆ ಗೊರವಯ್ಯ ರಾಮಣ್ಣ ಅವರನ್ನು ಸಿಂಹಾಸನ ಕಟ್ಟೆಯಿಂದ ಕಾರಣೀಕ ಸ್ಥಳಕ್ಕೆ ಗೊರವ ಸಮೂಹ ಭವ್ಯ ಮೆರವಣಿಗೆಯಲ್ಲಿ ಕರೆತಂದಿತು. ಈ ವೇಳೆ 'ಏಳು ಕೋಟಿ ಏಳು ಕೋಟಿಗೋ... ಚಹಾಂಗ ಬಲೋ' ಎಂಬ ಸ್ವಾಮಿಯ ಉದ್ಘೋಷ ಮುಗಿಲು ಮುಟ್ಟಿತು.
ಸುಕ್ಷೇತ್ರದ ಪರಂಪರೆಯ ಸಂಕೇತವಾಗಿರುವ ಬಿಲ್ಲು ಏರಿದ ಗೊರವಯ್ಯ 'ಸದ್ದಲೇ' ಎಂದು ಕೂಗುತ್ತಿದ್ದಂತೆ ಡೆಂಕನಮರಡಿಯಲ್ಲಿ ಸೇರಿದ್ದ ಲಕ್ಷಾಂತರ ಭಕ್ತರು ಕ್ಷಣಕಾಲ ಸ್ತಬ್ಧವರಾದರು. ಆಗ ಗೊರವಯ್ಯ ರಾಮಣ್ಣ ದೈವವಾಣಿಯನ್ನು ನುಡಿದು ಕೆಳಕ್ಕೆ ಜಿಗಿದರು. ಸುತ್ತಲೂ ನೆರೆದಿದ್ದ ಗೊರವ ಸಮೂಹ ಅವರನ್ನು ಕಂಬಳಿಯಲ್ಲಿ ಹಿಡಿದರು.
ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿಯು ಈ ವರ್ಷದ ಭವಿಷ್ಯವಾಣಿ ಆಗಿರಲಿದೆ ಎಂಬುದು ಭಕ್ತರ ನಂಬಿಕೆ.
ಪ್ರಸಕ್ತ ವರ್ಷದ ಕಾರಣಿಕ ನುಡಿಯಲ್ಲಿ ಮಿಶ್ರ ಫಲವಿದೆ. ಮಳೆ, ಬೆಳೆ ಸಮೃದ್ಧವಾಗಿ ನಾಡು ಸುಭಿಕ್ಷವಾಗಲಿದೆ ಎಂದು ಎಂದು ಭಕ್ತರು ಕಾರಣಿಕ ನುಡಿಯನ್ನು ವ್ಯಾಖಿನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.