ADVERTISEMENT

ಮೈಸೂರು–ಕುಶಾಲನಗರ ರೈಲು ಮಾರ್ಗ ಯೋಜನೆ ರದ್ದು

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 23:30 IST
Last Updated 20 ಜನವರಿ 2026, 23:30 IST
<div class="paragraphs"><p>ರೈಲು ಮಾರ್ಗ</p></div>

ರೈಲು ಮಾರ್ಗ

   

ಮೈಸೂರು: ಮೈಸೂರು–ಕುಶಾಲನಗರ ನಡುವೆ ಸುಮಾರು 89 ಕಿ.ಮೀ ಉದ್ದದ ಉದ್ದೇಶಿತ ರೈಲು ಮಾರ್ಗ ನಿರ್ಮಾಣ ಮಾಡುವ ಯೋಜನೆಯನ್ನು ನೈರುತ್ಯ ರೈಲ್ವೆಯು ಸದ್ಯಕ್ಕೆ ಕೈಬಿಟ್ಟಿದೆ. 

ಈ ಕುರಿತು ನೈರುತ್ಯ ರೈಲ್ವೆ ವಿಭಾಗೀಯ ಅಧಿಕಾರಿಗಳು ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ. ‘ಉದ್ದೇಶಿತ ಮಾರ್ಗ ದೀರ್ಘಾವಧಿಯಲ್ಲಿ ಲಾಭದಾಯಕವಾಗಿಲ್ಲ’ ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ.

ADVERTISEMENT

ಯೋಜನೆ ಜಾರಿಗೆ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಆಸಕ್ತಿ ತೋರಿದ್ದರು. ₹3,084 ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಪ್ರಸ್ತಾವ ಸಿದ್ಧಪಡಿಸಿದ್ದು, ಜಮೀನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರಿದ್ದರು. ಆದರೆ, ಈ ಪ್ರಸ್ತಾವ ಕೈಬಿಡುವಂತೆ ಸರ್ಕಾರ ಪತ್ರ ಬರೆದಿತ್ತು.

ಯೋಜನೆ ಸಂಬಂಧ ಸಮೀಕ್ಷೆ ನಡೆಸಲು 2018–19ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ನೈರುತ್ಯ ರೈಲ್ವೆಗೆ ಹಸಿರುನಿಶಾನೆ ತೋರಿತ್ತು. 1,379 ಎಕರೆ ಭೂಸ್ವಾಧೀನ ಪಡೆಯುವ ಅಂದಾಜಿತ್ತು. 2022ರ ಜೂನ್‌ನಲ್ಲಿ ಸ್ಥಳ ಸಮೀಕ್ಷೆಯ ಅಂತಿಮ ಪ್ರಕ್ರಿಯೆ ಆರಂಭಗೊಂಡಿತ್ತು. ಪರಿಸರ ಪ್ರಿಯರಿಂದ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. 

ಕೇಂದ್ರಕ್ಕೆ ಮನವಿ: ‘ಈ ಯೋಜನೆ ಮೈಸೂರು-ಕೊಡಗು ಜನರ ಬಹುದಿನದ ಕನಸು. ಯೋಜನೆಯ ಪರ-ವಿರೋಧ ಎರಡೂ ಇವೆ. ಎಲ್ಲರ ಅಭಿಪ್ರಾಯ ಪಡೆದು ಮರು ಪರಿಶೀಲಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು’ ಎಂದು ಮೈಸೂರು–ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.