ADVERTISEMENT

ಮೈಸೂರು–ಮಂಗಳೂರು ಹೆದ್ದಾರಿ ಬಂದ್: ರಸ್ತೆ ‌ಮಧ್ಯೆ ಸಿಲುಕಿದ ವಾಹನಗಳು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 4:29 IST
Last Updated 3 ಆಗಸ್ಟ್ 2022, 4:29 IST
ಆರಂಬೂರಿನಲ್ಲಿ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವುದು
ಆರಂಬೂರಿನಲ್ಲಿ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವುದು   

ಮಂಗಳೂರು: ಭಾರಿ ಮಳೆಯಿಂದಾಗಿ ಸುಳ್ಯ ತಾಲ್ಲೂಕಿನಲ್ಲಿ ಪಯಸ್ವನಿ ಉಕ್ಕಿ ಹರಿಯುತ್ತಿರುವುದರಿಂದ ಮೈಸೂರು–ಮಂಗಳೂರು ಹೆದ್ದಾರಿ ಬಂದ್ ಆಗಿದೆ.

ಸುಳ್ಯ ತಾಲ್ಲೂಕಿನ ಪೇರಾಜೆ ಹಾಗೂ ಆರಂಬೂರು ಬಳಿ ಹೆದ್ದಾರಿಯಲ್ಲಿ ಭಾರಿ‌ ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ನೂರಾರು ವಾಹನಗಳು ರಸ್ತೆಯಲ್ಲಿ ಸಿಲುಕಿವೆ.

ಮುಂಜಾವ 3 ಗಂಟೆಯ ನಂತರ ವಾಹನಗಳ ಸಂಚಾರ ಸ್ಥಗಿತಗೊಂಡಿದೆ‌. ಪೇರಾಜೆ ಬಿಳಿಯೂರು ಬಳಿ ಹೆದ್ದಾರಿಯಲ್ಲಿ ನೀರಿನಲ್ಲಿ ರಾಜಹಂಸ ಬಸ್ ಸಿಲುಕಿಹಾಕಿಕೊಂಡು ಆತಂಕ ಸೃಷ್ಟಿಸಿತು.

ಬಸ್‌ನಲ್ಲಿ ಒಂಬತ್ತು ಮಂದಿ‌ ಪ್ರಯಾಣಿಕರಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಬೋಟನ್ನು ಬಸ್ ಬಳಿ ತೆಗೆದುಕೊಂಡು ಹೋಗಿ ಒಂಬತ್ತು ಪ್ರಯಾಣಿಕರನ್ನು‌ ಸುರಕ್ಷಿತವಾಗಿ ಎತ್ತರದ ಜಾಗಕ್ಕೆ ಕರೆದೊಯ್ದರು.

ಆರು ಗಂಟೆಯ ಹೊತ್ತಿಗೆ ನೀರಿನ ಮಟ್ಟ ಕಡಿಮೆಯಾದ ಬಳಿಕ ಬಸ್, ಲಾರಿಗಳು ಸೇರಿದಂತೆ ದೊಡ್ಟ ವಾಹನಗಳು ಸಂಚಾರ ಆರಂಭಿಸಿದವು. ಎರಡು ಕಿ.ಮೀ ಮುಂದೆ ಆರಂಬೂರುಯಲ್ಲಿ ಹೆದ್ದಾರಿಯಲ್ಲಿ ನೀರು ಹರಿಯುತ್ತಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ನದಿಯ ಬಳಿ ಇರುವ ಮನೆಯೊಂದು ಸಂಪೂರ್ಣ ಜಲಾವೃತವಾಗಿದೆ.

ಆರಂಬೂರಿನಿಂದ ಸುಳ್ಯಕ್ಕೆ 5 ಕಿ.ಮೀ ದೂರ ಇದೆ.

‘ನಸುಕು ಮೂರು ಗಂಟೆಯಿಂದ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಮಂಗಳವಾರ ನಸುಕಿನಲ್ಲೂ ನೀರಿನ ಮಟ್ಟ ಏರಿಕೆಯಾಗಿತ್ತು. ಆದರೆ ವಾಹನ ಸಂಚಾರಕ್ಕೆ ತೊಂದರೆಯಾಗಿರಲಿಲ್ಲ’ ಎಂದು ಸ್ಥಳೀಯ ನಿವಾಸಿ‌ ಮೇದಪ್ಪ ಅವರು ಪ್ರಜಾವಾಣಿಗೆ ತಿಳಿಸಿದರು.

ಭಾರಿ ವಾಹನಗಳ ಸಂಚಾರ ನಿಷೇಧ

ಕೊಡಗು ಜಿಲ್ಲೆಯ ಕೆಲವೆಡೆ ಮಂಗಳವಾರ ರಾತ್ರಿ ಇಡೀ ಧಾರಾಕಾರವಾಗಿ ಮಳೆ ಸುರಿದಿದೆ. ದೇವರಕೊಲ್ಲಿ ಹಾಗೂ ಕೊಯನಾಡು ನಡುವೆ ರಸ್ತೆಯಲ್ಲಿ ದೊಡ್ಡ ಗಾತ್ರದ ಬಿರುಕುಗಳು ಮೂಡಿವೆ. ಇದರಿಂದ ಖಾಸಗಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೆದ್ದಾರಿಯ ಸ್ಥಿತಿಯನ್ನು ಇಂದು ಪರಿಶೀಲಿಸಲಿದ್ದಾರೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.