
ಇಡಿ
ನಾಗಮಂಗಲ (ಮಂಡ್ಯ ಜಿಲ್ಲೆ): ತಾಲ್ಲೂಕು ಕಚೇರಿಯಲ್ಲಿ ನಕಲಿ ಕಂದಾಯ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿ ಕಬಳಿಕೆ ಮಾಡಿದ ಪ್ರಕರಣದ ಪರಿಶೀಲನೆಗೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿದ್ದರು.
ತಾಲ್ಲೂಕು ಕಚೇರಿ ಹಾಗೂ ಪಟ್ಟಣ ಠಾಣೆಗೆ ಅಧಿಕಾರಿಗಳ ತಂಡ ತೆರಳಿ ದಾಖಲೆಗಳನ್ನು ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಡಿವೈಎಸ್‌ಪಿ ಚಲುವರಾಜು ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸುತ್ತಿರುವಾಗಲೇ, ಬೆಂಗಳೂರು ವಲಯ ಕಚೇರಿಯ ಇ.ಡಿ. ಅಧಿಕಾರಿಗಳು ಮಧ್ಯ ಪ್ರವೇಶಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಡಿವೈಎಸ್ಪಿ ನೇತೃತ್ವದ ತಂಡವೂ ಬೆಳಿಗ್ಗೆಯಿಂದ ಸಂಜೆವರೆಗೂ ತಾಲ್ಲೂಕು ಕಚೇರಿಯ ದರಖಾಸ್ತು ಶಾಖೆಯಲ್ಲಿ ಕಡತಗಳ ಶೋಧ ನಡೆಸಿತು.
ವಿವರ: ಬಗರ್ ಹುಕುಂ ಸಕ್ರಮ ಯೋಜನೆಯಡಿ ಅಕ್ರಮವಾಗಿ ಭೂ ಮಂಜೂರಾತಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದ ಮೇರೆಗೆ ಮಂಡ್ಯ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳ ತಂಡವು ನಾಗಮಂಗಲ ತಾಲ್ಲೂಕು ಕಚೇರಿ ಮೇಲೆ ಜ.13ರಂದು ದಾಳಿ ನಡೆಸಿತ್ತು.
ಇಬ್ಬರು ಶಿರಸ್ತೇದಾರರು, ಸರ್ಕಾರಿ ನೌಕರರು ಮತ್ತು ಖಾಸಗಿ ವ್ಯಕ್ತಿಗಳು ಸೇರಿ ಒಟ್ಟು 10 ಆಪಾದಿತರ ವಿರುದ್ಧ ನಾಗಮಂಗಲ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಇದುವರೆಗೆ ಆರು ಮಂದಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಇಬ್ಬರು ಶಿರಸ್ತೇದಾರರು ಸೇರಿ ಒಟ್ಟು 6 ಸರ್ಕಾರಿ ನೌಕರರರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ನೇತೃತ್ವದಲ್ಲಿ ಮತ್ತೊಂದು ತನಿಖಾ ತಂಡವನ್ನು ಜಿಲ್ಲಾಧಿಕಾರಿ ರಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.