ADVERTISEMENT

ಮುನಿಸು ದೂರ: ಯಡಿಯೂರಪ್ಪರನ್ನು ಕೊಂಡಾಡಿದ ಕಟೀಲ್‌ 

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 5:21 IST
Last Updated 5 ಅಕ್ಟೋಬರ್ 2019, 5:21 IST
   

ಬೆಂಗಳೂರು: ಯಡಿಯೂರಪ್ಪ ಅವರೊಂದಿಗೆ ಕೆಲ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದ ಬಿಜೆಪಿ ಅಧ್ಯಕ್ಷ ನಳೀನ್‌ ಕುಮಾರ್‌, ಸಂಧಾನದ ಬಳಿಕ ಯಡಿಯೂರಪ್ಪ ಅವರನ್ನು ಹೊಗಳಲಾರಂಭಿಸಿದ್ದಾರೆ. ನೆರೆ ಪರಿಹಾರ ವಿಚಾರದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಸಂತ್ರಸ್ತರ ಖಾತೆಗಳಿಗೇ ನೇರ ಪರಿಹಾರ ಸಂದಾಯವಾಗುವಂತೆ ಮಾಡಿ ಮಾದರಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೊಂಡಾಡಿದರು.

ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಕಳೆದ ವರ್ಷ ಸಿಎಂ ಆಗಿದ್ದಾಗ ಸಂತ್ರಸ್ತರಿಗೆ 92 ಸಾವಿರ ಕೊಡುತ್ತೇನೆ ಎಂದು ಹೇಳಿದ್ದರೂ ಅದು ಕೈಸೇರಿಲ್ಲ. ಆದರೆ ಯಡಿಯೂರಪ್ಪ ಅವರಿಂದಾಗಿ ಈಗಾಗಲೇ 1 ಲಕ್ಷ ಫಲಾನುಭವಿಗಳಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಿದೆ ಎಂದರು.

ADVERTISEMENT

ಪಕ್ಷದ ಶಾಸಕರು, ಸಂಸದರು ಸಂಯಮದಿಂದ ವರ್ತಿಸಬೇಕು. ಅದನ್ನು ಮೀರಿದವರ ವಿರುದ್ಧ ಪಕ್ಷದ ನಿಯಮಾನುಸಾರ ಕ್ರಮ ಅನಿವಾರ್ಯ ಎಂದು ಕಟೀಲ್ ಎಚ್ಚರಿಸಿದರು.

ನೆರೆ ಪರಿಹಾರದ ವಿಚಾರವಾಗಿ ರಾಜ್ಯದ ಬಿಜೆಪಿ ಸಂಸದರು, ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದ ಯತ್ನಾಳ್‌ ಅವರಿಗೆ ಇದು ಪರೋಕ್ಷ ಎಚ್ಚರಿಕೆಯಾಗಿ ಕಂಡಿತು.

ಎನ್ ಡಿ ಆರ್ ಎಫ್ ನಿಯಮ ನನಗೆ ಗೊತ್ತಿದೆ. ಕೇಂದ್ರದಿಂದ ಪರಿಹಾರ ಬಂದೇ ಬರುತ್ತದೆ ಎಂದು ನಾನು ಹೇಳುತ್ತಲೇ ಇದ್ದೆ. ಆದರೆ ಅದುವೇ ದೊಡ್ಡ ರಾಜಕೀಯ ವಿಷಯವಾಯಿತು ಎಂದು ಅವರು ವಿಪಕ್ಷಗಳ ವಿರುದ್ಧವೂ ಕಿಡಿ ಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.