ADVERTISEMENT

ನಮ್ಮ ಮೆಟ್ರೊ: ಸಂಭ್ರಮದ ಜತೆ ಹಕ್ಕಿನ ಮಾತು

ಮೆಟ್ರೊ ಯೋಜನೆಗೆ ರಾಜ್ಯದ್ದು ₹25,379 ಕೋಟಿ, ಕೇಂದ್ರದ್ದು ₹7,468 ಕೋಟಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 15:53 IST
Last Updated 10 ಆಗಸ್ಟ್ 2025, 15:53 IST
ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಸಾಕ್ಷಿಯಾದರು
ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಸಾಕ್ಷಿಯಾದರು   

ಬೆಂಗಳೂರು: ನಗರದ ಪ್ರಮುಖ ಕೈಗಾರಿಕಾ ಪ್ರದೇಶವಾದ ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ಸ್ ಸಿಟಿಯನ್ನು ಸಂಪರ್ಕಿಸುವ ‘ನಮ್ಮ ಮೆಟ್ರೊ ಹಳದಿ ಮಾರ್ಗ’ದ ಉದ್ಘಾಟನೆ ಕಾರ್ಯಕ್ರಮವು, ಸಂಭ್ರಮದ ಜತೆಗೆ, ರಾಜ್ಯದ ಹಕ್ಕೊತ್ತಾಯಕ್ಕೆ ವೇದಿಕೆಯೂ ಆಯಿತು.

ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯೆ ನಿರಂತರ ನಡೆಯುತ್ತಿದ್ದ ಅನುದಾನದ ಸಂಘರ್ಷ ತುಸು ತಿಳಿಯಾದಂತೆ ಗೋಚರಿಸಿದ ಸಮಾರಂಭ, ಪ್ರಜಾತಂತ್ರ ವ್ಯವಸ್ಥೆಯ ಅಂದಕ್ಕೂ ಸಾಕ್ಷಿಯಾಯಿತು. 

19.15 ಕಿ.ಮೀ ಉದ್ದದ ನಮ್ಮ ಮೆಟ್ರೊ ಹಳದಿ ಮಾರ್ಗ, ಮೂರನೇ ಹಂತದ ಮೆಟ್ರೊ ಯೋಜನೆ ಶಂಕು ಸ್ಥಾಪನೆ ಹಾಗೂ ದೇಶದ ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂಭ್ರಮಕ್ಕೆ ಜತೆಯಾದರು. 

ADVERTISEMENT

ಪ್ರಧಾನಿ ಮೋದಿಯವರ ಜತೆಗೆ ನಗುನಗುತ್ತಲೇ ಸಿದ್ದರಾಮಯ್ಯ ಪಾಲ್ಗೊಂಡರು. ಬಳಿಕ, ಎಲೆಕ್ಟ್ರಾನಿಕ್ಸ್‌ ಸಿಟಿಯ ಐಐಐಟಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಎದುರೇ, ಮೆಟ್ರೊಕ್ಕೆ ರಾಜ್ಯದ ಪಾಲಿನ ವಿವರವನ್ನು ಮಂಡಿಸಿದರಲ್ಲದೇ, ಕೇಂದ್ರವು ಕಡಿಮೆ ಅನುದಾನ ನೀಡಿದೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.

ಸಂಭ್ರಮಕ್ಕೆ ಜತೆ:

ಮೇಕ್ರಿ ಸರ್ಕಲ್‌ ಬಳಿ ಇರುವ ಭಾರತೀಯ ವಾಯುಪಡೆಯ ತರಬೇತಿ ಕೇಂದ್ರಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗುತ್ತಲೇ ಬರಮಾಡಿಕೊಂಡರು. ಇಬ್ಬರು ನಾಯಕರ ನಡುವಣ ಕುಶಲೋಪರಿಗೆ ಸಾಕ್ಷಿ ಎನ್ನುವಂತೆ ಸಿದ್ದರಾಮಯ್ಯ ಅವರು ಮೋದಿ ಅವರ ತೋಳು ಸವರಿ ಸ್ವಾಗತಕ್ಕೆ ಮೆರುಗು ತಂದರು.

ಅಲ್ಲಿಂದ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೇಂದ್ರ ರೈಲು ನಿಲ್ದಾಣಕ್ಕೆ ತೆರಳಿದ ಮೋದಿ ಅವರು ಬೆಂಗಳೂರು–ಬೆಳಗಾವಿ, ಅಮೃತಸರ–ವೈಷ್ಣೋದೇವಿ, ಪುಣೆ–ಅಜ್ನಿ ನಡುವಣ ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳಿಗೆ ಚಾಲನೆ ನೀಡಿದರು.

ಬಹುನಿರೀಕ್ಷಿತ ಹಳದಿ ಮಾರ್ಗವನ್ನು ಉದ್ಘಾಟಿಸಲು ಆರ್‌.ವಿ.ಕಾಲೇಜು ಮೆಟ್ರೊ ನಿಲ್ದಾಣಕ್ಕೆ ಬಂದ ಮೋದಿ ಅವರಿಗೆ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜತೆಯಾದರು. ನಿಲ್ದಾಣದಲ್ಲಿದ್ದ ಕಿಯೋಸ್ಕ್‌ನಲ್ಲಿ ಕ್ಯುಆರ್‌ ಕೋಡ್ ಸ್ಕ್ಯಾನ್‌ ಮಾಡಿ ಟಿಕೆಟ್‌ ಖರೀದಿಸಿದ ಮೋದಿ ಅವರು ಹಳದಿಮಾರ್ಗದ ರೈಲು ಹತ್ತಿದರು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವೆ ಕುಳಿತು ಮೋದಿ ಪ್ರಯಾಣಿಸುತ್ತಲೇ, ನಗೆಯ ಚಟಾಕಿ ಹಾರಿಸಿದರು. ಮೂವರು ನಗುತ್ತಿರುವ ವಿಡಿಯೊಗಳು ಜಾಲತಾಣದಲ್ಲಿ ಹರಿದಾಡಿವು.

ಪಾಲು ಪ್ರಸ್ತಾಪಿಸಿದ ಸಿ.ಎಂ:

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ‘ಮನಮೋಹನ್‌ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಬೆಂಗಳೂರು ಮೆಟ್ರೊ ರೈಲು ಯೋಜನೆಗೆ ಚಾಲನೆ ನೀಡಲಾಗಿತ್ತು. ಮೆಟ್ರೊ ರೈಲು ಯೋಜನೆಯ ವೆಚ್ಚದಲ್ಲಿ ಶೇ 50ರಷ್ಟು ಕೇಂದ್ರ ಸರ್ಕಾರ ಮತ್ತು ಶೇ 50ರಷ್ಟು ರಾಜ್ಯ ಸರ್ಕಾರ ಒದಗಿಸಬೇಕು ಎಂಬುದು ಒಪ್ಪಂದ. ಆದರೆ ಕೇಂದ್ರ ಸರ್ಕಾರ ಶೇ 13ರಷ್ಟು ಮಾತ್ರ ಕೊಡುತ್ತಿದ್ದು, ವೆಚ್ಚವು ರಾಜ್ಯ ಸರ್ಕಾರದ ಮೇಲೆಯೇ ಬೀಳುತ್ತಿದೆ’ ಎಂದು ಮಾತು ಆರಂಭಿಸಿದರು.

‘ಬೆಂಗಳೂರು ಮೆಟ್ರೊ ಜಾಲವು ಈಗ 96 ಕಿ.ಮೀ.ನಷ್ಟು ಉದ್ದವಿದೆ. ಇದಕ್ಕೆ ರಾಜ್ಯ ಸರ್ಕಾರವು ₹25,379 ಕೋಟಿ ವೆಚ್ಚ ಮಾಡಿದ್ದರೆ, ಕೇಂದ್ರ ಸರ್ಕಾರ ವೆಚ್ಚ ಮಾಡಿರುವುದು ₹7,468.86 ಕೋಟಿ ಮಾತ್ರ. ಮೆಟ್ರೊ ಯೋಜನೆಯಲ್ಲಿ ರಾಜ್ಯ ಸರ್ಕಾರದ್ದೇ ಸಿಂಹಪಾಲು’ ಎಂದು ಮೆಟ್ರೊ ಯೋಜನೆ ಮೇಲಿನ ರಾಜ್ಯದ ಹಕ್ಕನ್ನು ಪ್ರತಿಪಾದಿಸಿದರು.

‘ಕೇಂದ್ರವು ಶೇ 50ರಷ್ಟು ವೆಚ್ಚವನ್ನು ಭರಿಸುವುದಿಲ್ಲ. ಬದಲಿಗೆ ರಾಜ್ಯ ಸರ್ಕಾರಕ್ಕೆ ಮತ್ತು ಬಿಎಂಆರ್‌ಸಿಎಲ್‌ಗೆ ಸಾಲ ನೀಡುತ್ತದೆ. ಅದೆಲ್ಲವನ್ನೂ ಬಡ್ಡಿಯ ಸಮೇತ ರಾಜ್ಯವು ವಾಪಸ್‌ ಮಾಡಬೇಕು. ಮೆಟ್ರೊ ಯೋಜನೆಗೆ ಕೇಂದ್ರವು ನೀಡಿದ್ದ ಸಾಲದಲ್ಲಿ ₹3,987 ಕೋಟಿಯಷ್ಟನ್ನು ಬಡ್ಡಿಯ ಸಮೇತ ಈಗಾಗಲೇ ನಾವು ವಾಪಸ್‌ ಮಾಡಿದ್ದೇವೆ’ ಎಂದು ಪ್ರಧಾನಿ ಮೋದಿ ಅವರತ್ತ ನೋಡಿದರು.

ಮುಂದುವರಿದು, ‘ಈಗ ಪ್ರತಿನಿತ್ಯ ಸರಾಸರಿ 9 ಲಕ್ಷ ಮಂದಿ ಮೆಟ್ರೊ ಬಳಸುತ್ತಿದ್ದಾರೆ. ಹಳದಿ ಮಾರ್ಗವೂ ಸೇರಿ ಇನ್ನು ಮುಂದೆ ದಿನನಿತ್ಯದ ಸರಾಸರಿ ಪ್ರಯಾಣಿಕರ ಸಂಖ್ಯೆ 12.50 ಲಕ್ಷವಾಗಲಿದೆ. ಮೆಟ್ರೊ 3ನೇ ಹಂತದ ಯೋಜನೆಗೆ ಪ್ರಧಾನಿಯವರು ಚಾಲನೆ ನೀಡಿದ್ದಾರೆ. 3ಎ ಹಂತದ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಅದಕ್ಕೆ ತ್ವರಿತವಾಗಿ ಅನುಮತಿ ನೀಡಬೇಕು ಮತ್ತು ಪ್ರಧಾನಿಯವರು ಅಗತ್ಯ ನೆರವು ಒದಗಿಸಬೇಕು’ ಎಂದು ಕೋರಿಕೆ ಮುಂದಿಟ್ಟರು.

ಆಗ ವೇದಿಕೆಯಲ್ಲಿದ್ದ ನಾಯಕರು ನಕ್ಕರು. ಅತ್ತ ತಿರುಗಿದ ಸಿದ್ದರಾಮಯ್ಯ ಅವರು, ‘ಏಕೆ ನಕ್ಕಿದ್ದು’ ಎಂದು ಪ್ರಶ್ನಿಸಿದರು. ‘2030ರ ವೇಳೆಗೆ ನಗರದ ಮೆಟ್ರೊ ಜಾಲವನ್ನು 220 ಕಿ.ಮೀ.ಗೆ ವಿಸ್ತರಿಸುವ ಗುರಿ ಹಾಕಿಕೊಳ್ಳಲಾಗಿದೆ. ಅದು ಅನುಷ್ಠಾನಕ್ಕೆ ಬಂದರೆ ದಿನನಿತ್ಯದ ಪ್ರಯಾಣಿಕರ ಸಂಖ್ಯೆ 30 ಲಕ್ಷಕ್ಕೆ ಏರಿಕೆಯಾಗಲಿದೆ’ ಎಂದು ಮಾತು ಮುಗಿಸಿದರು. 

‘ಆಪರೇಷನ್ ಸಿಂಧೂರ ಯಶಸ್ಸಿಗೆ ಬೆಂಗಳೂರಿನ ಕೊಡುಗೆ’:

‘ಆಪರೇಷನ್‌ ಸಿಂಧೂರದಲ್ಲಿ ಪಾಕಿಸ್ತಾನವನ್ನು ಮಂಡಿಯೂರಿ ಕೂರಿಸಿದೆವು. ಆಪರೇಷನ್‌ ಸಿಂಧೂರ ಯಶಸ್ವಿಯಾಗುವಲ್ಲಿ ಬೆಂಗಳೂರಿನ ಜನರ ಕಂಪನಿಗಳ ಕೊಡುಗೆ ಇದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ‘ಬೆಂಗಳೂರು ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದೆ. ಇಂದು ವಿಶ್ವದಲ್ಲಿ ಬೆಂಗಳೂರು ಒಂದು ಮಹತ್ವದ ಸ್ಥಾನದಲ್ಲಿದೆ ಎಂದರೆ ಅದಕ್ಕೆ ಇಲ್ಲಿನ ಜನರ ಶ್ರಮವೇ ಕಾರಣ’ ಎಂದರು. ‘ಇಂತಹ ಬೆಂಗಳೂರನ್ನು ಭವಿಷ್ಯದ ದಿನಗಳಿಗೆ ಸಿದ್ಧಪಡಿಸಬೇಕು. ಅದರ ಭಾಗವಾಗಿಯೇ ಮೆಟ್ರೊ ಹಳದಿ ಮಾರ್ಗಕ್ಕೆ ಚಾಲನೆ ನೀಡಲಾಗಿದೆ. ಇದರಿಂದ ಜನರ ಸಮಯ ಮತ್ತು ಹಣ ಉಳಿತಾಯವಾಗಲಿದೆ. ವಾಯು–ಶಬ್ದ ಮಾಲಿನ್ಯವೂ ಇಳಿಕೆಯಾಗಲಿದೆ. ಈ ಯೋಜನೆಗೆ ಇನ್ಫೊಸಿಸ್‌ ಬಯೊಕಾನ್‌ನಂತಹ ಕಂಪನಿಗಳು ಸಿಎಸ್‌ಆರ್‌ ನಿಧಿಯನ್ನು ಒದಗಿಸುವ ಮೂಲಕ ಅಭಿವೃದ್ಧಿ ಹೊಸ ಮಾದರಿಗೆ ನಾಂದಿ ಹಾಡಲಾಗಿದೆ’ ಎಂದರು.

ಕೇಂದ್ರದ ಕೊಡುಗೆ ಬಣ್ಣಿಸಿದ ಮೋದಿ:

‘2014ರಲ್ಲಿ ದೇಶದ 5 ನಗರಗಳಲ್ಲಿ ಮಾತ್ರ ಮೆಟ್ರೊ ರೈಲು ಜಾಲವಿತ್ತು. ನಮ್ಮ ಸರ್ಕಾರ ಬಂದ ನಂತರ ಮೆಟ್ರೊ ಜಾಲ ವಿಸ್ತರಿಸಲಾಗಿದೆ. ಈಗ ದೇಶದ 24 ನಗರಗಳಲ್ಲಿ ಒಟ್ಟು 1000 ಕಿ.ಮೀ.ಗೂ ಹೆಚ್ಚು ಉದ್ದದ ಮೆಟ್ರೊ ಜಾಲವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ 2014ರವರೆಗೆ ಕೇವಲ 20000 ಕಿ.ಮೀ.ನಷ್ಟು ಉದ್ದದ ರೈಲುಮಾರ್ಗವನ್ನು ಮಾತ್ರ ವಿದ್ಯುದೀಕರಣ ಮಾಡಲಾಗಿತ್ತು. 2025ರ ವೇಳೆಗೆ ವಿದ್ಯುದೀಕರಣವಾದ ರೈಲುಮಾರ್ಗದ ಉದ್ದವು 40000 ಕಿ.ಮೀ.ಗೆ ಏರಿಕೆಯಾಗಿದೆ’ ಎಂದು ವಿವರಿಸಿದರು. ‘ಈ ಅವಧಿಯಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 74ರಿಂದ 160ಕ್ಕೆ ಜಲಮಾರ್ಗಗಳನ್ನು 3ರಿಂದ 30ಕ್ಕೆ ಏಮ್ಸ್‌ಗಳನ್ನು 7ರಿಂದ 22ಕ್ಕೆ ವೈದ್ಯಕೀಯ ಕಾಲೇಜುಗಳನ್ನು 387ರಿಂದ 704ಕ್ಕೆ ಐಐಟಿಗಳನ್ನು 16ರಿಂದ 23ಕ್ಕೆ ಐಐಎಂಗಳನ್ನು 13ರಿಂದ 21ಕ್ಕೆ ಹೆಚ್ಚಿಸಿದ್ದೇವೆ’ ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.