ADVERTISEMENT

ನಂದಗುಡಿ ಕೈಗಾರಿಕಾ ಪ್ರದೇಶ|ಭೂಸ್ವಾಧೀನ ಆರಂಭಿಸಿ: ಸಚಿವರಿಗೆ ಶರತ್ ಬಚ್ಚೇಗೌಡ ಮನವಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 2:18 IST
Last Updated 29 ಅಕ್ಟೋಬರ್ 2025, 2:18 IST
<div class="paragraphs"><p>ಶರತ್ ಬಚ್ಚೇಗೌಡ</p></div>

ಶರತ್ ಬಚ್ಚೇಗೌಡ

   

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ನಂದಗುಡಿ ಕೈಗಾರಿಕಾ ಪ್ರದೇಶದ ಭೂಸ್ವಾಧೀನ ಪ್ರಕ್ರಿಯೆಯನ್ನು ಮರು ಆರಂಭಿಸಬೇಕು ಎಂದು ಶಾಸಕ ಶರತ್‌ ಬಚ್ಚೇಗೌಡ ಅವರು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರಿಗೆ ಮನವಿ ಮಾಡಿದ್ದಾರೆ.

ಖನಿಜ ಭವನದಲ್ಲಿ ಸಚಿವರನ್ನು ಮಂಗಳವಾರ ಭೇಟಿ ಮಾಡಿದ್ದ ಶರತ್‌, ‘ನಂದಗುಡಿ ಕೈಗಾರಿಕಾ ಪ್ರದೇಶಕ್ಕಾಗಿ 1,000 ಎಕರೆ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಆಗಿತ್ತು. ಅದು ಅಲ್ಲಿಗೇ ನಿಂತಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶವಿದ್ದು, ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲು ಕ್ರಮ ತೆಗದುಕೊಳ್ಳಬೇಕು’ ಎಂದು ಕೋರಿದ್ದಾರೆ.

ADVERTISEMENT

‘ಹೊಸಕೋಟೆಯು ಬೆಂಗಳೂರಿಗೆ ಸಮೀಪದಲ್ಲಿದೆ. ಜಾಗತಿಕ ಮಟ್ಟದ ಹತ್ತಾರು ಕಂಪನಿಗಳು ಇಲ್ಲಿ ತಮ್ಮ ಡೇಟಾ ಕೇಂದ್ರಗಳನ್ನು ಆರಂಭಿಸಲು ಆಸಕ್ತಿ ಹೊಂದಿವೆ. ಈ ಅವಕಾಶವನ್ನು ನಾವು ಬಳಸಿಕೊಳ್ಳಬೇಕು. ಸ್ಥಗಿತವಾಗಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಿ’ ಎಂದು ಮನವಿ ಮಾಡಿದ್ದಾರೆ.

ಇದಕ್ಕೆ ಸಚಿವರು, ‘ನಂದಗುಡಿಯಲ್ಲಿ ಸ್ವೀಡನ್‌ ಕೈಗಾರಿಕಾ ಪಾರ್ಕ್‌, ತೈವಾನ್‌ ಕೈಗಾರಿಕಾ ಪಾರ್ಕ್‌ ಸ್ಥಾಪಿಸುವ ಯೋಜನೆ ಇದೆ. ಇದು ಸಾಧ್ಯವಾದರೆ ಹೊಸಕೋಟೆ ಸುತ್ತಮುತ್ತಲಿನ ಯುವಜನರಿಗೆ ಉದ್ಯೋಗ ಸಿಗಲಿದ್ದು, ಆರ್ಥಿಕ ಅಭಿವೃದ್ಧಿಗೆ ವೇಗ ದೊರೆಯಲಿದೆ’ ಎಂದಿದ್ದಾರೆ.

ನವೆಂಬರ್‌ಗೆ ‘ಕಲಾಲೋಕ’ ಲೋಕಾರ್ಪಣೆ

ಮೈಸೂರು ರೇಷ್ಮೆ ಸೀರೆಗಳು, ಚನ್ನಪಟ್ಟಣದ ಬೊಂಬೆ, ಬಂಜಾರ ಕಲಾಕೃತಿಗಳು, ಇಳಕಲ್‌ ಸೀರೆ, ಕಾಫಿ, ಲಿಡ್ಕರ್‌ ಉತ್ಪನ್ನಗಳು, ಮೈಸೂರು ಸ್ಯಾಂಡಲ್‌ ಸೋಪ್‌... ಜಿ.ಐ. ಮ್ಯಾನತೆ ಹೊಂದಿರುವ ಕರ್ನಾಟಕದ 40ಕ್ಕೂ ಹೆಚ್ಚು ಉತ್ಪನ್ನಗಳ ಮಾರಾಟಕ್ಕೆಂದೇ ರೂಪಿಸಲಾಗುತ್ತಿರುವ ಮೊದಲ ‘ಕಲಾಲೋಕ’ ಮಳಿಗೆಯು ಇದೇ ನವೆಂಬರ್‌ನಲ್ಲಿ ಕಾರ್ಯಾರಂಭ ಮಾಡಲಿದೆ. ‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊದಲ ‘ಕಲಾಲೋಕ’ ಮಳಿಗೆಯನ್ನು ನವೆಂಬರ್‌ನಲ್ಲಿ ಉದ್ಘಾಟಿಸಲಾಗುತ್ತದೆ. ಜಿ.ಐ ಮಾನ್ಯತೆ ಹೊಂದಿರುವ ರಾಜ್ಯದ ಉತ್ಪನ್ನಗಳನ್ನು ಅಲ್ಲಿ ಮಾರಾಟ ಮಾಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಳಿಗೆ ಉದ್ಘಾಟಿಸಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ’ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಮಾಹಿತಿ ನೀಡಿದ್ದಾರೆ. ‘ಕರ್ನಾಟಕ ವಿಶೇಷ ಉತ್ಪನ್ನಗಳನ್ನು ಜಾಗತಿಕ ಬ್ರ್ಯಾಂಡ್‌ಗಳನ್ನಾಗಿ ಮಾಡುವುದು ಸರ್ಕಾರದ ಆಶಯ. ಅದಕ್ಕೆ ತಕ್ಕುದಾಗಿ ಪ್ಯಾಕೇಜಿಂಗ್‌, ಗಿಫ್ಟ್‌ ಪ್ಯಾಕೇಜಿಂಗ್ ಸಹ ಮಾಡಲಾಗುತ್ತದೆ’ ಎಂದು ವಿವರಿಸಿದ್ದಾರೆ.