ADVERTISEMENT

‘ನಂದಿನಿ’ ಅಸ್ತಿತ್ವಕ್ಕೆ ಧಕ್ಕೆ ಇಲ್ಲ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 13:12 IST
Last Updated 1 ಜನವರಿ 2023, 13:12 IST
ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿ   

ಹುಬ್ಬಳ್ಳಿ: ‘ಅಮುಲ್ ಮತ್ತು ನಂದಿನಿ‌ ಒಟ್ಟಿಗೆ ಸೇರಿಕೊಂಡು ಮಾರ್ಕೆಟಿಂಗ್ ಮಾಡಿದರೆ, ಎರಡರ ಬ್ರ್ಯಾಂಡ್ ಮೌಲ್ಯ ಹೆಚ್ಚಲಿದೆ ಎಂದು‌ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆಯೆ ವಿನಾ, ಅಮುಲ್‌ನಲ್ಲಿ ನಂದಿನಿ ವಿಲೀನ‌ ಮಾಡುವುದಾಗಿ ಹೇಳಿಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಂದಿನಿ ಹಾಲಿನ ಅಸ್ತಿತ್ವಕ್ಕೆ ಇದರಿಂದ ಯಾವುದೇ ಧಕ್ಕೆ ಆಗುವುದಿಲ್ಲ. ಶಾ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದರು.

‘ಅಮಿತ್ ಶಾ ಅವರ ಸೂಚನೆ ಮೇರೆಗೆ ರಾಜ್ಯದಾದ್ಯಂತ ಜ. 2ರಿಂದ 12ರವರೆಗೆ ‘ಬೂತ್ ವಿಜಯ್ ಅಭಿಯಾನ’ ನಡೆಯಲಿದೆ. 2ರಂದು ಪಕ್ಷದ ಜನಪ್ರತಿನಿಧಿಗಳು ಸ್ಥಳೀಯವಾಗಿ ಚಾಲನೆ ನೀಡಲಿದ್ದಾರೆ. ಜ. 21ರಿಂದ 29ರವರೆಗೆ ಮನೆಮನೆಗೆ ಬಿಜೆಪಿ ಅಭಿಯಾನ ನಡೆಸಲಾಗುವುದು’ ಎಂದು ಹೇಳಿದರು.

ಕಾಂಗ್ರೆಸ್‌ನಿಂದ ದ್ರೋಹ: ‘ಮಹದಾಯಿ ನಮ್ಮ ತಾಯಿ ಎಂದು ಹೇಳಿಕೊಂಡು ಹುಬ್ಬಳ್ಳಿಯಲ್ಲಿ ಸಮಾವೇಶ ಮಾಡಲು ಮುಂದಾಗಿರುವ ಕಾಂಗ್ರೆಸ್‌ನ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್, ಆ ತಾಯಿಗೇ ದ್ರೋಹ ಮಾಡಿದ್ದಾರೆ. ಅವರ ಅಧಿನಾಯಕಿ ಸೋನಿಯಾ ಗಾಂಧಿ ಅವರು, ಮಹದಾಯಿಯ ಒಂದು ಹನಿ ನೀರನ್ನೂ ಕೊಡುವುದಿಲ್ಲ ಎಂದು ಹೇಳಿದ್ದು ಸುಳ್ಳೇ? ರಾಜ್ಯ ಮತ್ತು ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದ್ದರೂ ಯೋಜನೆ ಜಾರಿಗೆ ತರಲಿಲ್ಲ’ ಎಂದು ಬೆಳಿಗ್ಗೆ ನಡೆದ ಮಹದಾಯಿ ವಿಜಯೋತ್ಸವ ರ‍್ಯಾಲಿಯಲ್ಲಿ ಜೋಶಿ ವಾಗ್ದಾಳಿ ನಡೆಸಿದರು.

ನೆಹರು ಮೈದಾನದಿಂದ ಹೊರಟ ರ‌್ಯಾಲಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಲ್ಯಾಮಿಂಗ್ಟನ್ ರಸ್ತೆ, ಸಿದ್ದಪ್ಪ ಕಂಬಳಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ ಹಾದು ಚನ್ನಮ್ಮ ವೃತ್ತ ತಲುಪಿತು. ಸಚಿವ ಜೋಶಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.

ಕಾರ್ಯಕರ್ತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಶಾಸಕರಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್ ಭಾವಚಿತ್ರಗಳನ್ನು ಪ್ರದರ್ಶಿಸಿದರು. ಶಾಸಕ ಅರವಿಂದ ಬೆಲ್ಲದ ಅವರನ್ನು ಹೊರತುಪಡಿಸಿದರೆ, ಬಿಜೆಪಿಯ ಇತರ ಶಾಸಕರು ಹಾಗೂ ವಿಧಾಣ ಪರಿಷತ್ ಸದಸ್ಯರು ರ‍್ಯಾಲಿಯಲ್ಲಿ ಪಾಲ್ಗೊಂಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.