ADVERTISEMENT

'ನಂದಿನಿ'ಯಲ್ಲಿ ಇನ್ನು ವಿಟಮಿನ್ 'ಎ', 'ಡಿ'!

ಕೆಎಂಎಫ್‌ನಿಂದ ಹೊಸ ಪ್ರಯೋಗ, ಯೋಜನೆಗೆ 30ರಂದು ಚಾಲನೆ

ರಾಜೇಶ್ ರೈ ಚಟ್ಲ
Published 29 ಜುಲೈ 2019, 8:46 IST
Last Updated 29 ಜುಲೈ 2019, 8:46 IST
ನಂದಿನಿ ಬ್ರ್ಯಾಂಡ್‌
ನಂದಿನಿ ಬ್ರ್ಯಾಂಡ್‌   

ಬೆಂಗಳೂರು:ನಿತ್ಯ ಮನೆ ಬಾಗಿಲಿಗೆ ಬರುವ ನಂದಿನಿ ಬ್ರ್ಯಾಂಡಿನ ಹಾಲಿನಲ್ಲಿ ಇನ್ನು ಮುಂದೆ ವಿಟಮಿನ್ 'ಎ' ಮತ್ತು ವಿಟಮಿನ್ 'ಡಿ' ಜೀವಸತ್ವಗಳೂ ಇರಲಿವೆ!

ಆ ಮೂಲಕ, ಈ ವಿಟಮಿನ್‌ಗಳಕೊರತೆಯಿಂದ ಉಂಟಾಗುವ ಇರುಳು ಅಂಧತ್ವ, ರಿಕೆಟ್ಸ್ ಮತ್ತಿತರ ಆರೋಗ್ಯ ಸಮಸ್ಯೆಗಳಿಂದ ಜನರನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳಿ (ಕೆಎಂಎಫ್) ಹೊಸ ಪ್ರಯೋಗಕ್ಕೆ ಮುಂದಾಗಿದೆ.

ದರದಲ್ಲಿ ಯಾವುದೇ ಹೆಚ್ಚಳ‌ ಮಾಡದೆ ಹಾಲಿನ ಸಾರವರ್ಧನೆಯ ಮೂಲಕ ವಿಟಮಿನ್ 'ಎ' ಮತ್ತು ವಿಟಮಿನ್ 'ಡಿ' ಕೊರತೆ ನೀಗಿಸಲು ನಿರ್ಧರಿಸಲಾಗಿದೆ. ರಾಜ್ಯದ ಎಲ್ಲ 14 ಜಿಲ್ಲಾ ಹಾಲು ಒಕ್ಕೂಟ ಮತ್ತು ಘಟಕಗಳ ಮೂಲಕ ನಿತ್ಯ ಮಾರಾಟವಾಗುವ ಟೋನ್ಡ್ ಮಿಲ್ಕ್, ಡಬಲ್ ಟೋನ್ಡ್ ಮಿಲ್ಕ್, ಸ್ಪೆಷಲ್ ಟೋನ್ಡ್ ಮಿಲ್ಕ್, ಮತ್ತು ಸ್ಟ್ಯಾಂಡರ್ಡೈಸ್‌ಡ್‌ಹಾಲಿನಲ್ಲಿ ಈ ವಿಟಮಿನ್‌ಗಳುಇರಲಿವೆ. ವಿಟಮಿನ್‌ಗಳನ್ನುಹೆಚ್ಚುವರಿಯಾಗಿ ಸೇರಿಸುವುದರಿಂದ ಹಾಲಿನಲ್ಲಿರುವ ಪೌಷ್ಟಿಕಾಂಶಗಳು ಮತ್ತಷ್ಟು ಹೆಚ್ಚಳವಾಗಲಿದೆ.

ADVERTISEMENT

ರಾಷ್ಟೀಯ ಹೈನು ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ)‌ಮತ್ತು ಟಾಟಾ ಟ್ರಸ್ಟ್‌ನವರ ಸಹಯೋಗದಲ್ಲಿ ಈ ಪ್ರಯೋಗಕ್ಕೆ ಮುಂದಾಗಿರುವ ಕೆಎಂಎಫ್, ಇದೇ 30ರಂದು ಯೋಜನೆಗೆ ಚಾಲನೆ ನೀಡಲಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅವರ 2012ರ ವರದಿ ಹಾಗೂ ನ್ಯಾಷನಲ್ ನ್ಯೂಟ್ರೀಷಿಯನ್ ಮಾನಿಟರಿಂಗ್ ಬ್ಯುರೊ (ಎನ್ಎನ್ಎಂಬಿ) ಅವರ ಇತ್ತೀಚಿನ ಸರ್ವೇಪ್ರಕಾರ ದೇಶದಲ್ಲಿ ಶೇ 70 ರಿಂದ ಶೇ 80ರಷ್ಟು ಜನರು ವಿಟಮಿನ್ 'ಎ' ಮತ್ತು 'ಡಿ' ಜೀವಸತ್ವದ ಕೊರತೆಯಿಂದ ಬಳಲುತ್ತಿದ್ದಾರೆ. ಇವುಗಳ ಕೊರತೆ ಹೆಚ್ಚಲು ಜೀವನ ಶೈಲಿ, ಆಹಾರ ಪದ್ಧತಿ, ಜನರು ಸೂರ್ಯನ ಬಿಸಿಲಿಗೆ ಶರೀರವನ್ನು ಒಡ್ಡುವುದು ಕಡಿಮೆ ಆಗುತ್ತಿರುವುದು ಕಾರಣವಾಗಿದೆ.

ಎಲ್ಲ ವಯೋಮಾನದ ಜನರು ಹಾಲು ಬಳಸುತ್ತಾರೆ. ಹೀಗಾಗಿ, ಹಾಲಿಗೆ ವಿಟಮಿನ್‌ಗಳಸಾರವರ್ಧನೆ ಮಾಡಿದರೆ ಈ ಕೊರತೆ ನೀಗಿಸಲು ಸಾಧ್ಯವಿದೆ ಎಂದು ಕೇಂದ್ರ ಆಹಾರ ಸುರಕ್ಷತೆ ಹಾಗೂ ಮಾನದಂಡಗಳ ಪ್ರಾಧಿಕಾರ (ಎಫ್ಎಸ್ಎಸ್ಎಐ) ತೀರ್ಮಾನಿಸಿತ್ತು. ಹೀಗಾಗಿ, ರಾಜ್ಯದಲ್ಲಿ ಜನರು ಹೆಚ್ಚು ಬಳಸುವ ಹಾಲಿನಲ್ಲಿ ಈ ವಿಟಮಿನ್‌ಗಳನ್ನು ಸೇರಿಸಲು ನಿರ್ಧರಿಸಲಾಗಿದೆ ಎಂದು ಕೆಎಂಎಫ್ ಮೂಲಗಳು ಹೇಳಿವೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.