ನಂದಿನಿ ಹಾಲು
ಬೆಂಗಳೂರು: ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹ 4 ಏರಿಕೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಇದರ ಜೊತೆಗೆ ನಂದಿನಿ ಮೊಸರಿನ ದರವೂ ಕೆ.ಜಿಗೆ ₹4 ಏರಿಕೆಯಾಗಲಿದೆ. ಏಪ್ರಿಲ್ 1 ರಿಂದ ಹೊಸ ದರ ಅನ್ವಯವಾಗಲಿದೆ.
ಹಾಲು ಉತ್ಪಾದನೆ ಮತ್ತು ಸಂಸ್ಕರಣಾ ವೆಚ್ಚಗಳನ್ನು ಪರಿಗಣಿಸಿ ರಾಜ್ಯದಲ್ಲಿ ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ದರ ಪರಿಷ್ಕರಣೆ ಮಾಡಲಾಗಿದೆ. ದರ ಪರಿಷ್ಕರಣೆಯ ಮೊತ್ತವು ರಾಜ್ಯದ ಹಾಲು ಉತ್ಪಾದಕರಿಗೆ ನೇರವಾಗಿ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.
ಈ ಹಿಂದೆ 500 ಮಿ.ಲೀಟರ್ ಪೊಟ್ಟಣದಲ್ಲಿ 50 ಮಿ.ಲೀಟರ್ ಹೆಚ್ಚುವರಿ ಹಾಲು ನೀಡಿ ₹ 2 ಏರಿಕೆ ಮಾಡಲಾಗಿತ್ತು. ಈಗ ಅದನ್ನು ಹಿಂಪಡೆಯಲಾಗಿದೆ. ಬೆಲೆ ಹೆಚ್ಚಾದರೂ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಇದೆ ಎಂದು ಸರ್ಕಾರ ಹೇಳಿದೆ.
ನಂದಿನಿಯ ಎಲ್ಲಾ ಬ್ರ್ಯಾಂಡ್ ಹಾಲಿನ ಬೆಲೆಯಲ್ಲೂ ₹4ರಷ್ಟು ಏರಿಕೆಯಾಗಲಿದೆ. ಹೆಚ್ಚುವರಿ ಬೆಲೆಯನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸಲಾಗುತ್ತದೆ ಎಂದು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.