ADVERTISEMENT

ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ ರಫ್ತಿಗೆ ಉತ್ತೇಜನ: ಪ್ರಧಾನಿಯಿಂದ ಗುಣಗಾನ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 12:37 IST
Last Updated 22 ಫೆಬ್ರುವರಿ 2026, 12:37 IST
   

ಮೈಸೂರು: ಜಿಲ್ಲೆಯ ಹೆಗ್ಗುರುತುಗಳಾದ ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನಡೆದ ‘ಮನ್‌ ಕಿ ಬಾತ್‌’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದಾರೆ.

‘ಈ ಉತ್ಪನ್ನಗಳು ಈಚೆಗೆ ಮಾಲ್ಡೀವ್ಸ್‌ಗೆ ರಫ್ತಾಗಿದ್ದನ್ನು ಉಲ್ಲೇಖಿಸಿದ್ದಾರೆ. ‘ಕೃಷಿ ಉತ್ನನ್ನಗಳು ಈಗ ವಿಮಾನದ ಮೂಲಕ ವಿದೇಶಗಳಿಗೆ ಸುಲಭವಾಗಿ ತಲುಪುತ್ತಿವೆ. ಇವು, ರುಚಿ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದು, ಜಿಐ ಟ್ಯಾಗ್‌ (ಭೌಗೋಳಿಕ ಸೂಚ್ಯಂಕ) ಕೂಡ ಪಡೆದಿವೆ. ಇಂದಿನ ರೈತರು ಗುಣಮಟ್ಟವನ್ನು ಬಯಸುತ್ತಾರೆ. ಬೆಳೆಯ ಪ್ರಮಾಣವನ್ನು ಹೆಚ್ಚಿಸುತ್ತಿದ್ದಾರೆ ಮತ್ತು ಛಾಪು ಮೂಡಿಸುತ್ತಿದ್ದಾರೆ’ ಎಂದು ಶ್ಲಾಘಿಸಿದ್ದಾರೆ.

ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆಯನ್ನು ಮೈಸೂರಿನಿಂದ ಇದೇ ಮೊದಲಿಗೆ ಮಾಲ್ಡೀವ್ಸ್‌ಗೆ ರಫ್ತು ಮಾಡಿದ್ದ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಜ.29ರಂದು ವಿಶೇಷ ವರದಿ ಪ್ರಕಟವಾಗಿತ್ತು.

ADVERTISEMENT

‘ಪ್ರಜಾವಾಣಿ’ಯಲ್ಲಿ ಜ.29ರಂದು ಪ್ರಕಟವಾಗಿದ್ದ ವಿಶೇಷ ವರದಿ

ವಿಶಿಷ್ಟ ರುಚಿಯ ಕಾರಣದಿಂದಾಗಿ ಜಿಐ ಪದಾರ್ಥಗಳ ಪಟ್ಟಿಯಲ್ಲಿರುವ ‘ನಂಜನಗೂಡು ರಸಬಾಳೆ’ಯು ದ್ವೀಪಗಳ ದೇಶ ಮಾಲ್ಡೀವ್ಸ್‌ನಲ್ಲಿ ಮಾರಾಟವಾಗಿತ್ತು. ಸುತ್ತೂರಿನ ಐಸಿಎಆರ್- ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರವು (ಕೆವಿಕೆ) ಸೇತುವೆಯಾಗಿ ಕೆಲಸ ಮಾಡಿತ್ತು. ರಸಬಾಳೆಯು ಮಾಲ್ಡೀವ್ಸ್‌ ಗ್ರಾಹಕರ ಗಮನಸೆಳೆದಿತ್ತು. ಇದರೊಂದಿಗೆ, ಈ ಬೆಳೆಗಳ ರಫ್ತಿಗೆ ಇರುವ ಅವಕಾಶದ ಬಾಗಿಲು ತೆರೆಯುವ ಕೆಲಸ ನಡೆದಿತ್ತು.

500 ಕೆ.ಜಿ. ನಂಜನಗೂಡು ರಸಬಾಳೆ ಹಾಗೂ 35 ಕೆ.ಜಿ. ಮೈಸೂರು ವೀಳ್ಯದೆಲೆ ರಫ್ತಾಗಿತ್ತು. ನಂಜನಗೂಡು ತಾಲ್ಲೂಕಿನ ಕುರಹಟ್ಟಿಯ ಕೆ.ಎಂ. ಶಿವರಾಜು ಹಾಗೂ ರವೀಶ್ ಎನ್., ನಾಗಪ್ಪ ಅವರಿಂದ ಖರೀದಿಸಿ ರವಾನಿಸಲಾಗಿತ್ತು. ಉತ್ತಮ ದರವೂ ಸಿಕ್ಕಿತ್ತು. ಈ ಪ್ರಯತ್ನವನ್ನು ಪ್ರಧಾನಿ ಮೋದಿ ಅವರು ಪ್ರಸ್ತಾಪಿಸಿ ಶ್ಲಾಘಿಸಿರುವುದು ರಫ್ತು ಪ್ರಮಾಣ ಹೆಚ್ಚಿಸಲು ಉತ್ತೇಜಿಸಿದಂತಾಗಿದೆ.

‘ಮೈಸೂರಿನ ವಿಶಿಷ್ಟ ಕೃಷಿ ಉತ್ಪನ್ನಗಳ ಪ್ರಧಾನಿ ನರೇಂದ್ರ ಮೋದಿಯವರು ಪ್ರಸ್ತಾಪಿಸಿದ್ದು ಖುಷಿ ತಂದಿದೆ. ಕೃಷಿಕರಿಗೆ ಹೆಮ್ಮೆಯ ವಿಷಯವೂ ಆಗಿದೆ. ಈ ವಿಶಿಷ್ಟ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಬೇಡಿಕೆಯು, ರೈತರಿಗೆ ಉತ್ತಮ ಬೆಲೆ ದೊರಕಿಸಿಕೊಡುವ ಜೊತೆಗೆ, ವಿಶಿಷ್ಟ ಗುಣಮಟ್ಟ ಮತ್ತು ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಸಂರಕ್ಷಿಸುವ ಪ್ರಾಮುಖ್ಯತೆಯನ್ನೂ ಬಲಪಡಿಸುತ್ತದೆ’ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.