ADVERTISEMENT

ಗಂಗಾಧರಸ್ವಾಮಿಗೆ ಜೀವಮಾನದ ಗೌರವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 20:15 IST
Last Updated 14 ಡಿಸೆಂಬರ್ 2018, 20:15 IST
ಪಿ.ಗಂಗಾಧರ ಸ್ವಾಮಿ
ಪಿ.ಗಂಗಾಧರ ಸ್ವಾಮಿ   

ಮೈಸೂರು: ಕರ್ನಾಟಕ ನಾಟಕ ಅಕಾಡೆಮಿಯ 2018ನೇ ಸಾಲಿನ ‘ಜೀವಮಾನದ ಗೌರವ ಪ್ರಶಸ್ತಿ’ಗೆ ಮೈಸೂರಿನ ರಂಗಕರ್ಮಿ ಪಿ.ಗಂಗಾಧರಸ್ವಾಮಿ ಭಾಜನರಾಗಿದ್ದಾರೆ.

ಗದಗ ಜಿಲ್ಲೆ ಮುಂಡರಗಿಯವರಾದ ಅವರು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಾಟಕ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಬೆಂಗಳೂರಿನ ಆದರ್ಶ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ನಲ್ಲಿ ರಂಗ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರು. ಹೆಗ್ಗೋಡು ‘ನೀನಾಸಂ’ನ ಮೊದಲ ಪ್ರಾಂಶುಪಾಲರಾದ ಅವರು, ನಂತರ ಮೈಸೂರಿನ ರಂಗಾಯಣದಲ್ಲಿ 1989ರಲ್ಲಿ ಪ್ರಶಿಕ್ಷಕರಾಗಿ ನೇಮಕಗೊಂಡರು. ಧಾರವಾಡ ರಂಗಾಯಣದ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ.

ಸಮುದಾಯದ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಜತೆಗೆ, ಬೀದರ್‌ನಿಂದ ಧಾರವಾಡದವರೆಗೆ ನಡೆದ ‘ಹೊಸ ಮೌಲ್ಯಗಳತ್ತ ಸಮುದಾಯ ಸಾಂಸ್ಕೃತಿಕ ಜಾಥಾ’ದಲ್ಲಿ ಪಾಲ್ಗೊಂಡಿದ್ದರು. ರಾಜ್ಯದಾದ್ಯಂತ ರಂಗ ಶಿಬಿರಗಳ ನಿರ್ದೇಶಕರಾಗಿ ದುಡಿದಿದ್ದಾರೆ.

ADVERTISEMENT

‘ವಾರ್ಷಿಕ ರಂಗ ಪ್ರಶಸ್ತಿ’:

‘ವಾರ್ಷಿಕ ರಂಗ ಪ್ರಶಸ್ತಿ’ಗೆ ರಂಗಾಯಣದ ರಂಗ ನಿರ್ದೇಶಕ ಮೈಮ್‌ ರಮೇಶ್ ಹಾಗೂ ಚಾಮರಾಜನಗರದ ರಂಗಕರ್ಮಿ ಕಿರಗಸೂರು ರಾಜಪ್ಪ ಭಾಜನರಾಗಿದ್ದಾರೆ.‌

ಮೈಮ್‌ ರಮೇಶ್‌ ಅವರು ರಂಗ ಕಲಾವಿದರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ ಗುರುತಿಸಿಕೊಂಡವರು. ಮೈಸೂರಿನ ರಂಗಾಯಣದಲ್ಲಿ ಕಲಾವಿದರಾಗಿ ಕಾರ್ಯನಿರ್ವಹಿಸುವುದರ ಜತೆಗೆ ಯುವ ಕಲಾವಿದರನ್ನು ಗುರುತಿಸಿ, ನಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದ್ದಾರೆ.

ಚಾಮರಾಜನಗರದ ಕಿರಗಸೂರು ರಾಜ‍ಪ‍್ಪ ಅವರು ರಂಗಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಗ್ರಾಮೀಣ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.