ADVERTISEMENT

ರಾಜ್ಯದಲ್ಲಿ ನದಿಗಳ ಮಾಲಿನ್ಯಕ್ಕಿಲ್ಲ ಕಡಿವಾಣ: ಕೇಂದ್ರ ಜಲಶಕ್ತಿ ಸಚಿವಾಲಯ ಅಸಮಾಧಾನ

ಮಂಜುನಾಥ್ ಹೆಬ್ಬಾರ್‌
Published 25 ಅಕ್ಟೋಬರ್ 2022, 21:15 IST
Last Updated 25 ಅಕ್ಟೋಬರ್ 2022, 21:15 IST
   

ನವದೆಹಲಿ: ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿರ್ದೇಶನ ನೀಡಿದ ಬಳಿಕವೂ ಕರ್ನಾಟಕದಲ್ಲಿ ನದಿಗಳಿಗೆ ದೊಡ್ಡ ಪ್ರಮಾಣದಲ್ಲಿ ಕೊಳಚೆ ನೀರು ಸೇರುತ್ತಿರುವ ಬಗ್ಗೆ ಕೇಂದ್ರ ಜಲ ಶಕ್ತಿ ಸಚಿವಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜಲ ಮಾಲಿನ್ಯ ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ಕೈಗೊಂಡ ಕ್ರಮಗಳು ತೃಪ್ತಿಕರವಾಗಿಲ್ಲ ಎಂದೂ ಹೇಳಿದೆ.

ದೇಶದ 351 ಪ್ರಮುಖ ನದಿಗಳಿಗೆ ಕೊಳಚೆ ನೀರು ಸೇರುತ್ತಿದ್ದು, ಅವುಗಳ ಮಾಲಿನ್ಯ ನಿಯಂತ್ರಣಕ್ಕೆ ತುರ್ತಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಎನ್‌ಜಿಟಿ ಸೂಚಿಸಿತ್ತು. ನದಿಗಳ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಜಲ ಶಕ್ತಿ ಸಚಿವಾಲಯದ ಕೇಂದ್ರ ಮೇಲ್ವಿಚಾರಣಾ ಸಮಿತಿಯು ರಾಜ್ಯ ಸರ್ಕಾರಗಳ ಜತೆಗೆ ಇತ್ತೀಚೆಗೆ ಸಭೆ ನಡೆಸಿದೆ.

ರಾಜ್ಯಗಳು ಕೈಗೊಂಡ ಕ್ರಮಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಸಚಿವಾಲಯದ ಕಾರ್ಯದರ್ಶಿ, ‘ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ನಿರ್ಮಾಣಕ್ಕೆ ಎನ್‌ಜಿಟಿ ಗಡುವು ವಿಧಿಸಿತ್ತು. ಆದರೆ, ಅನೇಕ ರಾಜ್ಯಗಳು ಗಡುವಿನೊಳಗೆ ಎಸ್‌ಟಿಪಿಗಳನ್ನು ನಿರ್ಮಿಸಿಲ್ಲ. ಅಮೃತ್‌, ಎನ್‌ಆರ್‌ಸಿಡಿ ಅನುದಾನದ ನೆರವಿನಿಂದ ಈ ಯೋಜನೆಗಳನ್ನು ತುರ್ತಾಗಿ ‍ಪೂರ್ಣಗೊಳಿಸಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

17 ನದಿಗಳಿಗೆ ಕೊಳಚೆ ನೀರು:ಕರ್ನಾಟಕದಲ್ಲಿ ನದಿಗಳ ತಟದಲ್ಲಿ 38 ನಗರಗಳು/ ಪಟ್ಟಣಗಳಿವೆ. ಈ ನದಿಗಳ ಮೀಸಲು ಪ್ರದೇಶದಲ್ಲಿ ಕಸ ಎಸೆಯದಂತೆ ಈ ಹಿಂದೆಯೇ ನಿರ್ದೇಶನ ನೀಡಲಾಗಿತ್ತು. ಆದರೆ, ಹಲವು ನಗರಗಳು ಹಾಗೂ ಪಟ್ಡಣಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಈಗಷ್ಟೇ 26 ನಗರಗಳು/ಪಟ್ಟಣಗಳುಘನತ್ಯಾಜ್ಯ ವಿಲೇವಾರಿಯ ವಿಸ್ತೃತಯೋಜನಾ ವರದಿಗಳನ್ನು ಅಂತಿಮಗೊಳಿಸಿವೆ. ಜತೆಗೆ, 146 ಚರಂಡಿಗಳು/ ರಾಜ ಕಾಲುವೆಗಳ ಮೂಲಕ ಕೊಳಚೆ ನೀರು 17 ನದಿಗಳಿಗೆ ಸೇರುತ್ತಿದೆ. ರಾಜ್ಯ
ದಲ್ಲಿ ಉತ್ಪಾದನೆಯಾಗುವ ಕೊಳಚೆ ನೀರಿನ ಪೈಕಿ ಶೇ 69ರಷ್ಟು ಮಾತ್ರ ಸಂಸ್ಕರಣೆ ಆ‌ಗುತ್ತಿದೆ. ಪ್ರತಿನಿತ್ಯ 569 ದಶಲಕ್ಷ ಲೀಟರ್‌ನಷ್ಟು ಕೊಳಚೆ ನೀರು ಜಲಕಾಯಗಳಿಗೆ ಸೇರುತ್ತಿದೆ ಎಂಬುದನ್ನು ಸಭೆಯಲ್ಲಿ ಬೊಟ್ಟು ಮಾಡಿ ತೋರಿಸಲಾಗಿದೆ.

ಕಾರ್ಯನಿರ್ವಹಿಸದ ಘಟಕಗಳು: ರಾಜ್ಯದ 10 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು (ಎಸ್‌ಟಿಪಿಗಳು) ಕಾರ್ಯ
ನಿರ್ವಹಿಸುತ್ತಿಲ್ಲ. ಈ ಘಟಕಗಳನ್ನು ತುರ್ತಾಗಿ ಸರಿಪಡಿಸುವಂತೆ ಜಲ ಶಕ್ತಿ ಸಚಿವಾಲಯದ ಅಧಿಕಾರಿಗಳು ಸೂಚಿಸಿದ್ದರು. 2022ರ ಜುಲೈ ತಿಂಗಳೊಳಗೆ ಇವುಗಳನ್ನು ದುರಸ್ತಿ ಮಾಡುವುದಾಗಿ ಕರ್ನಾಟಕ ಸರ್ಕಾರದ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಈಗಲೂ ಈ ಘಟಕಗಳು ದುರಸ್ತಿಯಾಗಿಲ್ಲ ಎಂದು ಜಲ ಶಕ್ತಿ ಸಚಿವಾಲಯದ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.