ADVERTISEMENT

ಕ್ಷೀಣಿಸುತ್ತಿವೆ 400 ಹಕ್ಕಿಗಳ ಪ್ರಭೇದಗಳು: ಕೀಟನಾಶಕಗಳ ಬಳಕೆ ಕಾರಣ?

ಕಲ್ಯಾಣ್‌ ರೇ
Published 17 ಫೆಬ್ರುವರಿ 2020, 23:07 IST
Last Updated 17 ಫೆಬ್ರುವರಿ 2020, 23:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದಲ್ಲಿ ಕಳೆದ 25 ವರ್ಷಗಳ ಅವಧಿಯಲ್ಲಿ ಸುಮಾರು 400 ಪ್ರಭೇದಗಳ ಪಕ್ಷಿಗಳ ಅಸ್ತಿತ್ವವು ಗಣನೀಯವಾಗಿ ಕ್ಷೀಣಿಸಿದೆ. ಭಾರತದಲ್ಲಿ ಕಂಡುಬಂದಿದ್ದ ವಿವಿಧ 867 ಪ್ರಭೇದದ ಪಕ್ಷಿಗಳಿಗೆ ಅನ್ವಯಿಸಿ ನಡೆದ ಸಮಗ್ರ ಅಧ್ಯಯನದ ವರದಿಯಲ್ಲಿ ಈ ಆತಂಕ ಕಾರಿ ಅಂಶವನ್ನು ಉಲ್ಲೇಖಿಸಲಾಗಿದೆ.

ಒಂದು ದಶಕದಲ್ಲಿ ರಾಷ್ಟ್ರಪಕ್ಷಿ ನವಿಲಿನ ಸಂಖ್ಯೆ ಗಮನಾರ್ಹ ರೀತಿಯಲ್ಲಿ ಏರಿಕೆಯಾಗಿದೆ. ಇತರೇ ಭಾರತೀಯ ಪ್ರಭೇದದ ಪಕ್ಷಿಗಳ ಸಂಖ್ಯೆ ಇದೇ ಅವಧಿಯಲ್ಲಿ ಶೇ 50ರಷ್ಟು ಕ್ಷೀಣಿಸಿದೆ. ಗಣನೀಯವಾಗಿ ಕ್ಷೀಣಿಸಿರುವ ಹಕ್ಕಿಗಳ ಪ್ರಭೇದಗಳಲ್ಲಿ ಗೀಜಗ, ವಲಸೆ ಬರುವ ವಿವಿಧ ಹಕ್ಕಿಗಳು, ಕಂದುಹಳದಿ ಬಣ್ಣದ ಹದ್ದು, ಗಿಡುಗ ಸೇರಿವೆ.

ಇಲ್ಲಿ ನಡೆಯುತ್ತಿರುವ ವಲಸೆ ಹಕ್ಕಿಗಳಿಗೆ ಸಂಬಂಧಿಸಿದ ಭಾಗಿದಾರರ 13ನೇ ಸಮಾವೇಶದಲ್ಲಿ ವರದಿ ಬಿಡುಗಡೆಡಲಾಯಿತು. ಹತ್ತು ಸಂಶೋಧನಾ ಸಂಸ್ಥೆಗಳ ಶಾಲೆಗಳ ಪ್ರತಿನಿಧಿಗಳು ಸೇರಿ 15,500 ಪಕ್ಷಿ ವೀಕ್ಷಕರು ದಾಖಲಿಸಿದ್ದ ಸುಮಾರು 10 ದಶಲಕ್ಷ ಅಭಿಪ್ರಾಯ ಆಧರಿಸಿ ಈ ವರದಿ ರೂಪಿಸಲಾಗಿದೆ.

ADVERTISEMENT

ಪಕ್ಷಿಗಳ ಸಂರಕ್ಷಣೆ ನಿಟ್ಟಿನಲ್ಲಿ ಈ ಮೊದಲು ಕೈಗೊಂಡಿದ್ದ ಅನೇಕ ಸಮೀಕ್ಷೆಗಳಿಗೆ ಪೂರಕ ಸಾಕ್ಷ್ಯಗಳ ಆಧಾರವಿರಲಿಲ್ಲ. ಈ ವರದಿಯು ಪಕ್ಷಿಗಳ ಅಸ್ತಿತ್ವ ನಶಿಸುತ್ತಿರುವ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಸಹಕಾರಿ ಆಗಲಿದೆ ಎಂದು ಡೆಹ್ರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆಯ ಧನಂಜಯ್‌ ಮೋಹನ್ ಹೇಳಿದರು.

ಕಳೆದ 25 ವರ್ಷಗಳಲ್ಲಿ ಗಣನೀಯವಾಗಿ ಕ್ಷೀಣಿಸಿರುವ ಪಕ್ಷಿ ಪ್ರಭೇದಗಳೆಂದರೆ ಬಿಳಿ ಕೊಕ್ಕು ಹೊಂದಿರುವ ರಣಹದ್ದು, ಗುಬ್ಬಚ್ಚಿ (ರಿಚರ್ಡ್‌ ಪಿಪಿಟ್‌), ಭಾರತದಲ್ಲಿ ಕಂಡುಬರುತ್ತಿದ್ದ ರಣಹದ್ದು, ಉದ್ದರೆಕ್ಕೆಯ ಬಾಲವುಳ್ಳ ಉಲಿ(ವಾರ್ಬ್ಲರ್), ಗೀಜಗ, ದೊಡ್ಡಕಡಲ ಉಲ್ಲಂಕಿ (ಕರ್ಲ್ಯೂ ಸ್ಯಾಂಡ್‌ಪೈಪರ್). ಪಕ್ಷಿ ವೀಕ್ಷಕರು ಈ ಅವಧಿಯಲ್ಲಿ 25 ವರ್ಷಗಳ ದೀರ್ಘಾವಧಿ ಮತ್ತು 5 ವರ್ಷಗಳ ಅಲ್ಪಾವಧಿಯಲ್ಲಿ ಆದ ಬದಲಾವಣೆಗಳನ್ನು ಪ್ರಮುಖವಾಗಿ ಗುರುತಿಸಿದ್ದರು.

ದೀರ್ಘಾವಧಿಗೆ ಅನ್ವಯಿಸಿ 487 ಪ್ರಭೇದಗಳು, ಅಲ್ಪಾವಧಿಗೆ ಅನ್ವಯಿಸಿ 677 ಪ್ರಭೇದಗಳ ಪಕ್ಷಿಗಳ ಅಸ್ತಿತ್ವವನ್ನು ಪ್ರಮುಖವಾಗಿ ಗಮನಿಸಲಾಗಿತ್ತು. ವಿವಿಧ ಪಕ್ಷಿಗಳು ಕಣ್ಮರೆಯಾಗಲು ನಾವು ನಿಖರವಾದ ಕಾರಣ ಪಟ್ಟಿ ಮಾಡಿಲ್ಲ. ವ್ಯಾಪಕವಾಗಿ ಕೀಟನಾಶಕಗಳ ಬಳಕೆ ಕಾರಣ ಇರಬಹುದು. ವರದಿಯು ಈ ನಿಟ್ಟಿನಲ್ಲಿ ಅಧ್ಯಯನಕ್ಕೆ ಸಹಕಾರಿ ಆಗಲಿದೆ ಎಂದು ನೇಚರ್ ಕನ್ಸರ್‌ವೇಷನ್‌ ಫೌಂಡೇಷನ್‌ನ ಅಶ್ವಿನ್‌ ವಿಶ್ವನಾಥನ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.