ADVERTISEMENT

ಕರ್ನಾಟಕದ ಚುನಾವಣೆ ಎಚ್ಚರಿಕೆಯ ಹೆಜ್ಜೆ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2022, 15:40 IST
Last Updated 13 ಡಿಸೆಂಬರ್ 2022, 15:40 IST
   

ಬೆಂಗಳೂರು: ಗುಜರಾತ್‌ ಗೆಲುವು ಮತ್ತು ಹಿಮಾಚಲ ಪ್ರದೇಶದ ಸೋಲಿನ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ. ಇಲ್ಲವಾದರೆ, ಹಿಮಾಚಲಪ್ರದೇಶದ ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮೈಮರೆಯದೇ ಕೆಲಸ ಮಾಡಿದರೆ ಗುಜರಾತ್‌ನಂತೆ ಫಲಿತಾಂಶ ಸಿಗುತ್ತದೆ. ಮೈಮರೆತರೆ ಹಿಮಾಚಲ ಪ್ರದೇಶದಂತೆ ಆಗುತ್ತದೆ. ಗುಜರಾತ್‌ ಗೆಲುವಿನ ಪ್ರೇರಣೆ ಪಡೆದು ನಾವು ಮುನ್ನಡೆಯಬೇಕಾಗುತ್ತದೆ’ ಎಂದರು.

ಈ ಬಾರಿ ಟಿಕೆಟ್‌ ಹಂಚಿಕೆಯಲ್ಲಿ ಉತ್ತಮ ಕೆಲಸ ಸಾಧನೆಯ ಜತೆಗೆ ಅಭ್ಯರ್ಥಿಯ ನಡವಳಿಕೆಯೂ ಪ್ರಮುಖ ಮಾನದಂಡವಾಗಲಿದೆ.ಚುನಾವಣಾ ವಿಚಾರದಲ್ಲಿ ಪಕ್ಷವನ್ನು ಅತ್ಯಂತ ಎಚ್ಚರಿಕೆಯಿಂದ ಮುನ್ನಡೆಸಬೇಕಾಗಿದೆ. ಕೆಲವು ಶಾಸಕರು ಉತ್ತಮ ಕೆಲಸ ಮಾಡಿದ್ದರೂ ಅವರ ನಡವಳಿಕೆ ಹೇಳಿಕೊಳ್ಳುವಂತಿಲ್ಲ. ಕೆಲಸದ ಜತೆಗೆ ನಡವಳಿಕೆಯೂ ಮುಖ್ಯವಾಗುತ್ತದೆ. ಹೀಗಾಗಿ ಗೆಲುವೊಂದೇ ಮಾನದಂಡವಲ್ಲ. ಎಲ್ಲ ವಿಚಾರವನ್ನು ಪರಿಶೀಲಿಸಿಯೇ ಟಿಕೆಟ್‌ ನೀಡಲಾಗುತ್ತದೆ. ಈ ವಿಚಾರವಾಗಿ ಆಂತರಿಕವಾಗಿ ಮತ್ತು ಹೊರಗಿನಿಂದಲೂ ಶಾಸಕರ ಕಾರ್ಯಕ್ಷಮತೆ ಬಗ್ಗೆ ವರದಿ ಪಡೆಯಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಇವೆಲ್ಲ ವಿಚಾರವನ್ನೂ ಪರಿಗಣಿಸಿ ಟಿಕೆಟ್‌ ನೀಡಲಾಗುವುದು. ಅವಕಾಶ ವಂಚಿತ ಸಣ್ಣ–ಪುಟ್ಟ ಸಮುದಾಯಗಳಿಗೆ ಟಿಕೆಟ್‌ ನೀಡುವುದರಲ್ಲಿ ಬಿಜೆಪಿ ಮುಂದೆ ಇದೆ. ಸಾಮಾಜಿಕವಾಗಿ ಹಿಂದುಳಿದವರಿಗೆ ಆದ್ಯತೆ ನೀಡಲಾಗುವುದು. ಬೇರೆ ಪಕ್ಷಗಳಿಂದ ಬರುವವರನ್ನು ಸಾರಾ ಸಗಟಾಗಿ ಸೇರಿಸಿಕೊಳ್ಳುವುದಿಲ್ಲ. ಸೇರಿಸಿಕೊಳ್ಳುವ ಮುನ್ನ ಪೂರ್ವಾಪರ ಪರಿಶೀಲಿಸಿ ಬಳಿಕವೇ ತೀರ್ಮಾನಿಸಲಾಗುವುದು ಎಂದು ರವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.