ADVERTISEMENT

‘ನೀಟ್’ ದಿನವೇ ರೋಡ್ ಶೋ ಭರಾಟೆ: ವಿದ್ಯಾರ್ಥಿಗಳಿಗೆ ತೊಂದರೆ, ಆತಂಕ

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ, ರಾಹುಲ್‌–ಪ್ರಿಯಾಂಕಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಮೇ 2023, 18:48 IST
Last Updated 4 ಮೇ 2023, 18:48 IST
ನರೇಂದ್ರ ಮೋದಿ ರೋಡ್‌ ಶೋ
ನರೇಂದ್ರ ಮೋದಿ ರೋಡ್‌ ಶೋ    

ಬೆಂಗಳೂರು: ದ್ವಿತೀಯ ಪಿಯು ಬಳಿಕ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಇದೇ 7ರಂದು (ಭಾನುವಾರ) ನಡೆಯಲಿದೆ. ರಾಜಕೀಯ ಪಕ್ಷಗಳು ಅದೇ ದಿನ ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನೂ ವಿವಿಧೆಡೆ ಆಯೋಜಿಸಿವೆ.

ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕನಿಷ್ಠ ಎರಡು ತಾಸು ಮೊದಲೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕಾಗುತ್ತದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರ– ಪಟ್ಟಣಗಳಲ್ಲಿ ಪರೀಕ್ಷೆ ನಡೆಯಲಿದೆ. ವಿಶೇಷ ಭದ್ರತಾ ವ್ಯವಸ್ಥೆ ಇರುವ ರಾಜಕೀಯ ನೇತಾರರ ರೋಡ್ ಶೋ, ಪ್ರಚಾರ ಸಭೆ, ರ್‍ಯಾಲಿ ಇದೇ ಸಮಯದಲ್ಲಿ ನಡೆಯಲಿವೆ. ವಿಶೇಷ ಭದ್ರತಾ ವ್ಯವಸ್ಥೆ ಕೈಗೊಳ್ಳಲು ನಾಯಕರು ಸಾಗುವ ಮಾರ್ಗಗಳನ್ನು ಸಾಮಾನ್ಯವಾಗಿ ಮೂರ್ನಾಲ್ಕು ಗಂಟೆ ಮೊದಲೇ ಬಂದ್ ಮಾಡಲಾಗುತ್ತದೆ. ಪರೀಕ್ಷೆ ಎದುರಿಸುವ ಸವಾಲನ್ನು ಒಡಲೊಳಗೆ ಇಟ್ಟುಕೊಂಡ ಮಕ್ಕಳು, ಈ ಅಡೆತಡೆಗಳನ್ನು ದಾಟಿ ಪರೀಕ್ಷಾ ಕೇಂದ್ರಗಳನ್ನು ಮುಟ್ಟುವುದಕ್ಕೆ ಕಷ್ಟ ಪಡಬೇಕಾಗುತ್ತದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಭಾನುವಾರ ಬೆಳಿಗ್ಗೆ 10ರಿಂದ ರೋಡ್ ಶೋ ನಡೆಸಲಿದ್ದಾರೆ. ಈಗ ನಿಗದಿಯಾಗಿರುವಂತೆ, ಬ್ರಿಗೇಡ್ ರಸ್ತೆಯ ಯುದ್ಧ ಸ್ಮಾರಕದ (ಒಪೆರಾ ಹೌಸ್ ವೃತ್ತ) ಬಳಿಯಿಂದ ಅವರ ರೋಡ್ ಶೋ ಶುರುವಾಗಲಿದೆ. ಅದು ಮಲ್ಲೇಶ್ವರದ ಸರ್ಕಲ್ ಮಾರಮ್ಮ ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ. ಮೋದಿಯವರ ರೋಡ್ ಶೋ ಯಾವ್ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಗಲಿದೆ ಎಂಬ ನಿಖರ ಮಾಹಿತಿಯನ್ನು ಪ್ರಧಾನಿ ಕಾರ್ಯಾಲಯ ಇನ್ನೂ ಬಿಡುಗಡೆ ಮಾಡಿಲ್ಲ. 

ADVERTISEMENT

10 ಗಂಟೆಗೆ ರೋಡ್ ಶೋ ಆರಂಭವಾದರೆ ಅದು ಸಾಗುವ ಮಾರ್ಗವನ್ನು ಕನಿಷ್ಠ ಎರಡು ಗಂಟೆ ಮೊದಲೇ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ತನ್ನ ಕಣ್ಗಾವಲಿನಲ್ಲಿ ಇಡುತ್ತದೆ. ರೋಡ್ ಶೋಗೆ ಯಾವುದೇ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ, ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗುತ್ತದೆ. ರೋಡ್ ಶೋ ಸಾಗುವ ಮುಖ್ಯಮಾರ್ಗಕ್ಕೆ ಸಂಪರ್ಕಿಸುವ ಎಲ್ಲ ಉಪ ಹಾಗೂ ಕಿರು ಮಾರ್ಗಗಳಲ್ಲಿ ಬ್ಯಾರಿಕೇಡ್ ಹಾಕಿ, ನಿರ್ಬಂಧ ವಿಧಿಸಲಾಗುತ್ತದೆ.

ಪ್ರಧಾನಿ ಮೋದಿಯವರ ಕಾರ್ಯಕ್ರಮವಲ್ಲದೇ, ಕಾಂಗ್ರೆಸ್ ನೇತಾರರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಕೂಡ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ರಾಹುಲ್–ಪ್ರಿಯಾಂಕಾ ಜೋಡಿ ಬೆಂಗಳೂರಿನಲ್ಲಿ ರೋಡ್ ಶೋ, ಪ್ರಚಾರ ಸಭೆ ನಡೆಸಲಿದ್ದಾರೆ. ಅವರ ಕಾರ್ಯಕ್ರಮಗಳ ಸಮಯ ಇನ್ನೂ ನಿಗದಿಯಾಗಿಲ್ಲ. 

‘ನಿಗದಿತ ಪರೀಕ್ಷಾ ಕೇಂದ್ರ ತಲುಪಲು ತಾವು ನಿತ್ಯವೂ ಓಡಾಡುವ ದಾರಿಯಲ್ಲಿ ಹೋಗುವುದು ರೋಡ್ ಶೋನಿಂದಾಗಿ ಭಾನುವಾರ  ಕಷ್ಟವಾಗುವ ಸಂಭವ ಇದೆ. ಎರಡು ಗಂಟೆ ಮೊದಲೇ ಪರೀಕ್ಷಾ ಕೇಂದ್ರದಲ್ಲಿ ಇರಬೇಕಾದರೆ, ಅದಕ್ಕಿಂತ 2–3 ಗಂಟೆ ಮೊದಲು ಮಕ್ಕಳನ್ನು ಮನೆಯಿಂದ ಹೊರಡಿಸಬೇಕಾಗುತ್ತದೆ’ ಎಂದು ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

‘ನಮ್ಮದು ಇಂದಿರಾನಗರ. ನನ್ನ ಪರೀಕ್ಷಾ ಕೇಂದ್ರ ಮಲ್ಲೇಶ್ವರದಲ್ಲಿದೆ. ಬೆಳಿಗ್ಗೆ 11.45ಕ್ಕೆ ಮೊದಲು ಹಾಜರಿರಬೇಕಿದ್ದರೆ ಬೆಳಿಗ್ಗೆ 10ಕ್ಕೆ ಮನೆಯಿಂದ ಹೊರಡಬೇಕು. ರ್‍ಯಾಲಿಯ ಕಾರಣ ಮಾರ್ಗ ಬದಲಾವಣೆಯಾದರೆ ಮತ್ತಷ್ಟು ಬೇಗ ಮನೆ ಬಿಡಬೇಕಾಗುತ್ತದೆ’ ಎಂದು ವಿದ್ಯಾರ್ಥಿನಿಯೊಬ್ಬರು ಆತಂಕ ವ್ಯಕ್ತಪಡಿಸಿದರು.

‌‘ರ್‍ಯಾಲಿಗಳಿಂದಾಗಿ ತೊಂದರೆಯಾಗಲಿದೆ. ಯಾವುದೇ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದರೆ ಅದರ ಹೊಣೆ ಹೊರುತ್ತಾರೆ? ರ್‍ಯಾಲಿಗಳನ್ನು ರದ್ದು ಮಾಡಬೇಕು. ಇಲ್ಲವೇ, ಪರೀಕ್ಷೆ ಮುಂದೂಡಬೇಕು’ ಎಂದು ಹಲವು ಪೋಷಕರು  ಒತ್ತಾಯಿಸಿದ್ದಾರೆ.

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಆತಂಕ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಧೀನದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕೆಲ ವಿಷಯಗಳ ಸೆಮಿಸ್ಟರ್‌ ಪರೀಕ್ಷೆಗಳು ಮೇ 6ರಂದು (ಶನಿವಾರ) ನಡೆಯುತ್ತಿದ್ದು, ಅಂದು ಆಯೋಜಿಸಿರುವ ರ್‍ಯಾಲಿಗಳಿಂದಲೂ ಪರೀಕ್ಷೆಗೆ ಹಾಜರಾಗಲು ಅಡಚಣೆಯಾಗಬಹುದು ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ. 

ಮೋದಿ ವಿರುದ್ಧ ಕಾಂಗ್ರೆಸ್‌ ದೂರು

ರ‍್ಯಾಲಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹನುಮಂತನ ಜಪ ಮಾಡಿರುವುದರ ವಿರುದ್ಧ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಕಾಂಗ್ರೆಸ್ ಗುರುವಾರ ದೂರು ನೀಡಿದೆ.

ಪ್ರಣಾಳಿಕೆಯಲ್ಲಿ ಬಜರಂಗದಳ ಸಂಘಟನೆಯನ್ನು ನಿಷೇಧಿಸಲಾಗುವುದು ಎಂದು ಕಾಂಗ್ರೆಸ್‌ ಹೇಳಿದೆ. ಈ ವಿಷಯ ವನ್ನು ಪ್ರಸ್ತಾಪಿಸಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಪ್ರಧಾನಿ, ಮೇ 2ರಂದು ಹೊಸಪೇಟೆಯಲ್ಲಿ ನಡೆದ ‌ರ‍್ಯಾಲಿಯಲ್ಲಿ ‘ಆಂಜನೇಯನಿಗೆ ಬೀಗ ಹಾಕುತ್ತೀರಾ’ ಎಂದು ಪ್ರಶ್ನಿಸಿದ್ದರು. ಬುಧವಾರ ನಡೆದ ಮೂರು ಭಾಷಣಗಳಲ್ಲೂ ಮೋದಿ ‘ಜೈ ಬಜರಂಗಬಲಿ’ ಎಂದು ಘೋಷಣೆ ಕೂಗಿದ್ದರು.

‘ಮೋದಿ ಅವರು ಪ್ರಚಾರದಲ್ಲಿ ಹಿಂದೂ ದೇವರ ಹೆಸರು ಹೇಳುವುದನ್ನು ನಿರ್ಬಂಧಿಸಬೇಕು’ ಎಂದು ದೂರಿನಲ್ಲಿ ಕಾಂಗ್ರೆಸ್ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.