ADVERTISEMENT

ವೈದ್ಯಕೀಯ ಕೋರ್ಸ್‌: 3ನೇ ಸುತ್ತಿನ ಸೀಟು ಹಂಚಿಕೆಯ ಪರಿಷ್ಕೃತ ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 13:42 IST
Last Updated 6 ಡಿಸೆಂಬರ್ 2025, 13:42 IST
<div class="paragraphs"><p>ಕೆಇಎ</p></div>

ಕೆಇಎ

   

ಬೆಂಗಳೂರು: ಹೈಕೋರ್ಟ್‌ ಆದೇಶದಂತೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ಪರಿಷ್ಕೃತ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ.

ಕೆಇಎ ಅ.24ರಂದು ಪ್ರಕಟಿಸಿದ್ದ ತಾತ್ಕಾಲಿಕ ಫಲಿತಾಂಶವನ್ನು ಹೈಕೋರ್ಟ್‌ ಆದೇಶದಂತೆ ರದ್ದುಪಡಿಸಲಾಗಿದ್ದು, ಪರಿಷ್ಕೃತ ಫಲಿತಾಂಶ ಪ್ರಕಟಿಸಲಾಗಿದೆ. ಆಕ್ಷೇಪಣೆಗಳು ಇದ್ದಲ್ಲಿ ಡಿ.7ರಂದು ಮಧ್ಯಾಹ್ನ 3ರ ಒಳಗೆ ಇ-ಮೇಲ್‌ ( keauthority-ka@nic.in ) ಮೂಲಕ ಕಳುಹಿಸಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿದ್ದಾರೆ.

ADVERTISEMENT

ಡಿ.8ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು‌ ಹಂಚಿಕೆಯಾದವರು ಡಿ.10ರ ಒಳಗೆ ಶುಲ್ಕ ಪಾವತಿಸಬೇಕು.  ಈಗಾಗಲೇ ಪಾವತಿಸಿರುವ ಶುಲ್ಕವನ್ನು ಕಡಿತಗೊಳಿಸಿ, ಉಳಿದ ಶುಲ್ಕ ಪಾವತಿಸಬೇಕು. ಸೀಟು ಖಾತರಿ ಚೀಟಿ ಡೌನ್‌ಲೋಡ್‌ ಮಾಡಿಕೊಂಡು, ಡಿ.11ರ ಒಳಗೆ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಮೂರನೇ ಸುತ್ತಿಗೆ ಹೊಸದಾಗಿ ಸೇರ್ಪಡೆಯಾದ ಒಂಬತ್ತು ಕಾಲೇಜುಗಳ 443 ಸೀಟುಗಳನ್ನೂ ಹಂಚಿಕೆಗೆ ಪರಿಗಣಿಸಲಾಗಿದೆ. 301 ಅಭ್ಯರ್ಥಿಗಳು ಈಗಾಗಲೇ ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಪಡೆದವರಾಗಿದ್ದು, ತೆರವಾಗುವ ಅಷ್ಟೂ ಸೀಟುಗಳಿಗೆ ಉಳಿದ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತದೆ. ಮೂರನೇ ಸುತ್ತಿನ‌ ಆರಂಭದಲ್ಲಿ ಇದ್ದ ಸೀಟು, ಡಿ.5ರವರೆಗೆ ವಿವಿಧ ಕಾರಣಗಳಿಂದ ರದ್ದುಪಡಿಸಿಕೊಂಡಿರುವ ಸೀಟು ಹಾಗೂ ಮೇಲಿನ ಕ್ರಮದ ಸೀಟು ಹಂಚಿಕೆಯ ನಂತರ ಉಳಿಕೆಯಾಗುವ ಸೀಟುಗಳನ್ನು  ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ. 

ಪಿಜಿ–ವೈದ್ಯಕೀಯ ದಿನಾಂಕ ವಿಸ್ತರಣೆ: 
ಇಂಡಿಗೊ ವಿಮಾನಗಳ ಸಂಚಾರ ರದ್ದಾಗಿರುವ ಕಾರಣ ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ‌ ಪ್ರವೇಶವನ್ನು ಡಿ.8ರವರೆಗೆ ವಿಸ್ತರಿಸಲಾಗಿದೆ.
ಎಂಬಿಬಿಎಸ್- ಬಿಡಿಎಸ್‌ ಸೀಟು ಹಂಚಿಕೆ ತಾತ್ಕಾಲಿಕ ಪಟ್ಟಿ ರದ್ದು
ಬೆಂಗಳೂರು: ಎಂಬಿಬಿಎಸ್‌ ಮತ್ತು ಬಿಡಿಎಸ್‌ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಳೆದ ಅಕ್ಟೋಬರ್ 24ರಂದು ಪ್ರಕಟಿಸಿದ್ದ ಮೂರನೇ ಸುತ್ತಿನ ಕೌನ್ಸೆಲಿಂಗ್‌ನ ತಾತ್ಕಾಲಿಕ ಹಂಚಿಕೆ ಪಟ್ಟಿಯನ್ನು ಹೈಕೋರ್ಟ್‌ ರದ್ದುಗೊಳಿಸಿದೆ. ಈ ಸಂಬಂಧ ಚಂದನಾ ಎಂ.ಚವಾಣ್‌ ಸೇರಿದಂತೆ 26 ವಿದ್ಯಾರ್ಥಿಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಬಿ.ಎಂ.ಶ್ಯಾಮ್‌ ಪ್ರಸಾದ್‌, ಎಂ.ಐ.ಅರುಣ್‌ ಮತ್ತು ಟಿ.ಎಂ.ನದಾಫ್‌ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ಭಾಗಶಃ ಮಾನ್ಯ ಮಾಡಿ ಈ ಕುರಿತಂತೆ ಆದೇಶಿಸಿದೆ. ‘ಮೂರನೇ ಸುತ್ತಿನ ಕೌನ್ಸೆಲಿಂಗ್‌ ಅನ್ನು ಹೊಸದಾಗಿ ಕೈಗೊಳ್ಳಬೇಕು. ತೀರ್ಪನ್ನು ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು’ ಎಂದು ಕೆಇಎಗೆ ನಿರ್ದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.