ನೆಹರು ಆರ್ಕೈವ್
(ಎಕ್ಸ್ ಚಿತ್ರ)
ಬೆಂಗಳೂರು: ನಮ್ಮ ರಾಷ್ಟ್ರದ ಬಗ್ಗೆ ಸರಿಯಾದ ಮಾಹಿತಿ ಪಡೆಯಲು ಪ್ರತಿಯೊಬ್ಬರೂ ನೆಹರು ಆರ್ಕೈವ್‌ಗೆ ಭೇಟಿ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರು ಅವರ ಸಮಗ್ರ ಬರಹಗಳನ್ನು ಒಳಗೊಂಡ ನೆಹರು ಆರ್ಕೈವ್‍ಗೆ (http://nehruarchive.in) ಚಾಲನೆ ಸಿಕ್ಕಿದೆ. ಇದು ಸಾರ್ವಜನಿಕರ ಜ್ಞಾನವನ್ನು ಹೆಚ್ಚಿಸುವ ದೃಷ್ಟಿಯಲ್ಲಿ ಒಂದು ಅದ್ಭುತ ಕೊಡುಗೆಯಾಗಿದೆ. ಒಂದೇ ಕಡೆ ನೆಹರು ಅವರ ಬದುಕು ಬರಹಗಳ ಕೂಲಂಕಷ ಅಧ್ಯಯನಕ್ಕಾಗಿ ಸೃಷ್ಟಿಸಿರುವ ದೇಶದ ಮೊದಲ ಡಿಜಿಟಲ್ ವೇದಿಕೆಯಾಗಿದೆ ಎಂದಿದ್ದಾರೆ.
ನಾನು ವಿದ್ಯಾರ್ಥಿಯಾಗಿದ್ದ ಸಂದರ್ಭ ನೆಹರು ಅವರ ಚಿಂತನೆಗಳನ್ನು ಅಧ್ಯಯನ ಮಾಡುವುದು ಇಷ್ಟೊಂದು ಸರಳವಾಗಿರಲಿಲ್ಲ. ಅವರ ಪುಸ್ತಕಗಳಿಗಾಗಿ ಸಾಕಷ್ಟು ಹುಡುಕಾಡಬೇಕಿತ್ತು, ಬಿಡಿ ಲೇಖನಗಳನ್ನು ತಡಕಾಡಬೇಕಿತ್ತು.
ನೆಹರು ಅವರು ಭಾರತದ ನಾಗರಿಕತೆಯ ಇತಿಹಾಸದ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದ್ದಾರೆ, ಸಂಸ್ಕೃತಿಯ ಶ್ರೀಮಂತಿಕೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಸವಿಸ್ತಾರವಾಗಿ ಬರೆದಿದ್ದಾರೆ. ಅವರ ಬರಹಗಳು ಭಾರತದ ಕೈಗನ್ನಡಿಯಂತಿದೆ. ದೇಶದ ಹೆಗ್ಗುರುತು, ಸಂಪ್ರದಾಯ ಮತ್ತು ಭವಿಷ್ಯದ ಭರವಸೆಗಳು ಅವರ ಬರಹಗಳಲ್ಲಿ ಅಡಕವಾಗಿವೆ ಎಂದು ತಿಳಿಸಿದ್ದಾರೆ.
ನೆಹರು ಕೊಡುಗೆಗಳನ್ನು ಮರೆಮಾಚುವ ಸಲುವಾಗಿ ಯತೇಚ್ಛವಾಗಿ ತಿರುಚಿದ ಸುದ್ದಿಗಳನ್ನು, ತಪ್ಪು ಮಾಹಿತಿಗಳನ್ನು ಹರಡುತ್ತಿರುವ ಈ ಸಂದರ್ಭದಲ್ಲಿ 'ನೆಹರೂ ಆರ್ಕೈವ್' ಅತ್ಯಂತ ಅಗತ್ಯವಾಗಿತ್ತು. ಈ ವೇದಿಕೆಯ ಮೂಲಕ ನೆಹರು ಅವರ ಬಗ್ಗೆ ಹೆಚ್ಚೆಚ್ಚು ತಿಳಿಯಿರಿ ಎಂದು ಯುವಕರನ್ನು ನಾನು ಈ ಮೂಲಕ ಒತ್ತಾಯಿಸುತ್ತಿದ್ದೇನೆ. ನೆಹರು ಅವರ ಬರಹಗಳು ಭಾರತದ ಇತಿಹಾಸದ ಬಗ್ಗೆ ಅತ್ಯಂತ ಪ್ರಾಮಾಣಿಕ ಅಭಿಪ್ರಾಯಗಳನ್ನು ಒಳಗೊಂಡಿದ್ದು, ಯೋಚನಾಬದ್ಧ ಹಾಗೂ ಅಧ್ಯಯನಶೀಲ ಚಿಂತನೆಗಳಾಗಿವೆ. ಭಾರತದ ಸದೃಢ ಭವಿಷ್ಯಕ್ಕೆ ಬುನಾದಿಯಾಗಿವೆ ಎಂದೂ ಸಿಎಂ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.