ADVERTISEMENT

ರಾಜ್ಯದಲ್ಲಿ ಓಮೈಕ್ರಾನ್‌ ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಡಿಸೆಂಬರ್ 2021, 18:10 IST
Last Updated 23 ಡಿಸೆಂಬರ್ 2021, 18:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ಕೊರೊನಾ ವೈರಾಣುವಿನ ರೂಪಾಂತರಿ ಓಮೈಕ್ರಾನ್ ಸೋಂಕಿನ 12 ಪ್ರಕರಣಗಳು ರಾಜ್ಯದಲ್ಲಿ ಗುರುವಾರ ದೃಢಪಟ್ಟಿವೆ. ಹೊಸ ತಳಿಯ ಸೋಂಕಿನ ಒಟ್ಟು ಪ್ರಕರಣಗಳ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

ವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆಯಿಂದ (ಜೀನೋಮ್‌ ಸೀಕ್ವೆನ್ಸಿಂಗ್‌)ಬೆಂಗಳೂರಿನಲ್ಲಿ 10, ಮೈಸೂರು ಹಾಗೂ ಮಂಗಳೂರಿನಲ್ಲಿ ತಲಾ ಒಬ್ಬರಲ್ಲಿ ಓಮೈಕ್ರಾನ್ ದೃಢಪಟ್ಟಿದೆ. ಸೋಂಕಿತ 12 ಮಂದಿಯಲ್ಲಿ 9 ಮಂದಿ ವಿದೇಶ ಪ್ರಯಾಣ ಮಾಡಿದ್ದರು.

ಬೆಂಗಳೂರಿನ ಕೋರಮಂಗಲದಲ್ಲಿಬ್ರಿಟನ್‌ನಿಂದ ಮರಳಿದ ಸೋಂಕಿತ ಯುವತಿಯ ನೇರ ಸಂಪರ್ಕದಿಂದ ಒಂದೇ ಕುಟುಂಬದ ಮೂವರು ಓಮೈಕ್ರಾನ್ ಪೀಡಿತರಾಗಿದ್ದಾರೆ. ಇವರು ಸೋಂಕು ಹೊಂದಿರುವ ಬಗ್ಗೆ ಬುಧವಾರವೇ ವರದಿ ಬಂದಿತ್ತು. ಇದನ್ನು ಆರೋಗ್ಯ ಇಲಾಖೆ ಗುರುವಾರ ಅಧಿಕೃತವಾಗಿ ಪ್ರಕಟಿಸಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಓಮೈಕ್ರಾನ್‌ ಪ್ರಕರಣಗಳ ಸಂಖ್ಯೆ 19ಕ್ಕೆ ಏರಿಕೆ ಆಗಿದೆ.

ADVERTISEMENT

ಮೈಸೂರಿನಲ್ಲಿ9 ವರ್ಷದ ಬಾಲಕಿಯಲ್ಲೂ ರೂಪಾಂತರ ತಳಿಯ ಸೋಂಕು ಪತ್ತೆಯಾಗಿದೆ.ಬಾಲಕಿ ಹಾಗೂ ಆಕೆಯ ಪೋಷಕರು ಸ್ವಿಟ್ಜರ್ಲೆಂಡ್‌ನಿಂದ ಅಬುಧಾಬಿಗೆ ತೆರಳಿ, ಇದೇ 19ರಂದು ಬೆಂಗಳೂರಿನ ಮೂಲಕ ಮೈಸೂರಿಗೆ ತೆರಳಿದ್ದರು. ಅವರಿಗೆ ವಿಮಾನ ನಿಲ್ದಾಣದಲ್ಲಿ ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಿದ್ದಾಗ ಸೋಂಕು ದೃಢಪಟ್ಟಿತ್ತು. ಆಸ್ಪತ್ರೆಯಲ್ಲಿ ಪ್ರತ್ಯೇಕವಾಸಕ್ಕೆ ಒಳಗಾದ ಅವರು, ಸದ್ಯ ಮೈಸೂರಿನಲ್ಲಿ ಪ್ರತ್ಯೇಕ ವಾಸದಲ್ಲಿ ಇದ್ದಾರೆ.

ಘಾನಾದಿಂದ ದುಬೈಗೆ ತೆರಳಿ, ಇದೇ 16ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ 27 ವರ್ಷದ ಬೆಂಗಳೂರಿನ ವ್ಯಕ್ತಿ ಸೋಂಕಿತರಾಗಿದ್ದಾರೆ. ಅವರೊಂದಿಗೆ ಸಂಪರ್ಕ ಹೊಂದಿದ್ದವರಲ್ಲಿ 26 ಮಂದಿಯನ್ನು ಪತ್ತೆ ಮಾಡಿ, ಆರ್‌ಟಿ–ಪಿಸಿಆರ್ ಪರೀಕ್ಷೆ ಮಾಡಲಾಗಿದೆ.

ಬ್ರಿಟನ್‌ನಿಂದ ಬೆಂಗಳೂರಿಗೆ ಮರಳಿ, ಸೋಂಕಿತರಾಗಿದ್ದ ಯುವತಿಯ ಸಂಪರ್ಕದಿಂದ ಅವರ ಸಹೋದರಿ (20 ವರ್ಷ), ತಂದೆ (56 ವರ್ಷ) ಹಾಗೂ ತಾಯಿಗೆ (54 ವರ್ಷ) ಹೊಸ ತಳಿಯ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬ್ರಿಟನ್‌ನಿಂದ ಇದೇ 17ರಂದು ಬೆಂಗಳೂರಿಗೆ ಮರಳಿದ 31 ವರ್ಷದ ಪುರುಷ, 18 ವರ್ಷದ ಯುವತಿ ಹಾಗೂ 21 ವರ್ಷದ ಯುವಕ ಹಾಗೂ42 ವರ್ಷದ ವ್ಯಕ್ತಿಯೂ ಈ ಸೋಂಕು ಹೊಂದಿರುವುದು ದೃಢಪಟ್ಟಿದೆ. ಡೆನ್ಮಾರ್ಕ್‌ನಿಂದ ಮರಳಿದ 11 ವರ್ಷದ ಬಾಲಕಿ ಹಾಗೂ ನೈಜೀರಿಯಾದಿಂದ ಬಂದ 59 ವರ್ಷದ ಬೆಂಗಳೂರಿನ ಮಹಿಳೆ ಓಮೈಕ್ರಾನ್ ಪೀಡಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.