ADVERTISEMENT

ಮಡಿಕೇರಿಯ ಎರಡು ಬಡಾವಣೆಗಳು ಖಾಲಿ!

ಮುಂಗಾರಿಗೂ ಮೊದಲೇ ಆತಂಕ, ಬಾಡಿಗೆ ಮನೆಯತ್ತ ನಿವಾಸಿಗಳ ಚಿತ್ತ

​ಪ್ರಜಾವಾಣಿ ವಾರ್ತೆ
Published 9 ಮೇ 2019, 19:31 IST
Last Updated 9 ಮೇ 2019, 19:31 IST
ಮಡಿಕೇರಿ ಇಂದಿರಾ ನಗರದ ಈಗಿನ ಸ್ಥಿತಿ
ಮಡಿಕೇರಿ ಇಂದಿರಾ ನಗರದ ಈಗಿನ ಸ್ಥಿತಿ   

ಮಡಿಕೇರಿ: ಪ್ರಕೃತಿ ಮಡಿಲಲ್ಲಿ ವಾಸಿಸುತ್ತಿದ್ದ ಜನರಲ್ಲಿ ಮತ್ತೆ ಆತಂಕದ ಕಾರ್ಮೋಡ ಕವಿದಿದೆ. ಮುಂಗಾರು ಮಳೆ ಸಮೀಪಿಸುತ್ತಿದ್ದಂತೆಯೇ ನಗರದ ಕೆಲವು ಬಡಾವಣೆಗಳ ಜನರು ಸುರಕ್ಷಿತ ಪ್ರದೇಶಗಳ ಹುಡುಕಾಟದಲ್ಲಿದ್ದಾರೆ.

ಕಳೆದ ಬಾರಿ ಭೂಕುಸಿತಕ್ಕೆ ಸಿಲುಕಿದ್ದ ಇಂದಿರಾ ನಗರ, ಚಾಮುಂಡೇಶ್ವರಿ ನಗರಗಳು ಈಗ ಖಾಲಿಯಾಗಿವೆ. ಇಲ್ಲಿನ ನಿವಾಸಿಗಳು ಸ್ವಂತ ಮನೆ ತೊರೆದು ಬಾಡಿಗೆ ಮನೆಗಳತ್ತ ತೆರಳುತ್ತಿದ್ದಾರೆ.

‘ಕೊಡಗಿನಲ್ಲಿ ಈ ವರ್ಷ ಕಡಿಮೆ ಪ್ರಮಾಣದಲ್ಲಿ ಮಳೆಯಾಗಲಿದೆ’ ಎಂದು ರಾಜ್ಯ ನೈಸರ್ಗಿಕ ಕೇಂದ್ರ ವಿಕೋಪ ಉಸ್ತುವಾರಿ ಕೇಂದ್ರವು ಮುನ್ಸೂಚನೆ ನೀಡಿದ್ದರೂ ಜನರಲ್ಲಿನ ಆತಂಕ ಕಡಿಮೆಯಾಗಿಲ್ಲ.

ADVERTISEMENT

ಅಪಾಯ ಎನಿಸಿದ ಬಡಾವಣೆಗಳಲ್ಲಿ ಮನೆ ಖಾಲಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ನಿವಾಸಿಗಳೇ ಸ್ವಯಂ ಪ್ರೇರಣೆಯಿಂದ ಮನೆಯ ಸಾಮಗ್ರಿಗಳನ್ನು ಸರಕು ಸಾಗಣೆ ವಾಹನಗಳಲ್ಲಿ ತುಂಬಿಸಿಕೊಂಡು ಸಂಬಂಧಿಕರ ಮನೆ ಸೇರುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಇಂದಿರಾ ನಗರ ಹಾಗೂ ಚಾಮುಂಡೇಶ್ವರಿ ನಗರಗಳು ಬೆಟ್ಟದಲ್ಲಿಯೇ ಇವೆ. ಮಂಗಳೂರು ರಸ್ತೆಯಿಂದ ನೋಡಿದರೆ ಮನೆಗಳು ನಕ್ಷತ್ರಗಳಂತೆ ಕಾಣುತ್ತಿದ್ದವು. ಕಳೆದ ವರ್ಷ ಸುರಿದ ಮಹಾಮಳೆಗೆ ಈ ಎರಡೂ ಬಡಾವಣೆಗಳಲ್ಲಿ 143 ಮನೆಗಳು ಧರೆಗುರುಳಿದ್ದವು. ಕೆಲವು ಮನೆಗಳು ಬಿರುಕುಬಿಟ್ಟಿದ್ದವು. ಮಳೆ ತಗ್ಗಿದ ನಂತರ ಮರಳಿದ ಜನರು, ಅಂಥ ಮನೆಗಳಲ್ಲೇ ವಾಸ್ತವ್ಯ ಹೂಡಿದ್ದರು. ಈಗ ಅವರೆಲ್ಲ ಮತ್ತೆ ಆತಂಕಕ್ಕೀಡಾಗಿದ್ದಾರೆ.

ಇದರೊಂದಿಗೆ, ‘ಕೊಡಗಿನಲ್ಲಿ ಮತ್ತೆ ಭಾರಿ ಮಳೆ ಸುರಿಯಲಿದೆ. ಭೂಕುಸಿತ ಸಂಭವಿಸಲಿದೆ’ ಎಂಬ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರಲ್ಲಿ ಇನ್ನಷ್ಟು ಭಯ ಹುಟ್ಟಿಸಿದೆ.

ನಗರದಲ್ಲಿ ಹೋಂ ಸ್ಟೇ ಹಾವಳಿಯಿಂದ ಬಾಡಿಗೆಗೆ ಮನೆಗಳೂ ಸಿಗುತ್ತಿಲ್ಲ. ಸಿಕ್ಕರೂ ದುಬಾರಿ. ಮನೆ ಕಳೆದುಕೊಂಡ ನಿರಾಶ್ರಿತರಿಗೆ ಸರ್ಕಾರ ತಿಂಗಳಿಗೆ ₹ 10 ಸಾವಿರ ಬಾಡಿಗೆ ಹಣ ಪಾವತಿಸುತ್ತಿದೆ. ಆದರೆ, ಮುಂಗಡವಾಗಿ ನೀಡಲು ಹಣವಿಲ್ಲದೇ ಬಹುತೇಕರು ಗೋಡೆಗಳು ಬಿರುಕು ಬಿಟ್ಟಿದ್ದ ಮನೆಗಳಲ್ಲಿಯೇ ಆಶ್ರಯ ಪಡೆದಿದ್ದರು.

‘ಮನೆ ಸಂಪೂರ್ಣ ಬಿರುಕು ಬಿಟ್ಟಿದೆ. ಮನೆ ಹಂಚಿಕೆಯ ಮೊದಲ ಪಟ್ಟಿಯಲ್ಲಿ ನನ್ನ ಹೆಸರಿಲ್ಲ. ಈ ಮನೆಯಲ್ಲಿ ಇರಲು ಭಯವಾಗುತ್ತಿದೆ’ ಎಂದು ಇಂದಿರಾ ನಗರದ ರುಕ್ಮಿಣಿ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.