ಎನ್‌ಜಿಟಿ
ನವದೆಹಲಿ: ಬೆಂಗಳೂರಿನ ಹೊಸಕೆರೆಹಳ್ಳಿ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯ ಮೀಸಲು ಪ್ರದೇಶದ ಅತಿಕ್ರಮಣದಾರರನ್ನು ತೆರವುಗೊಳಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶ ನೀಡಿದೆ. ಇದರಿಂದಾಗಿ, ಎರಡು ಬಹುಮಹಡಿ ಕಟ್ಟಡಗಳು ಹಾಗೂ 63 ಮನೆಗಳನ್ನು ಬಿಬಿಎಂಪಿ ತೆರವುಗೊಳಿಸಬೇಕಿದೆ.
ರಾಜಕಾಲುವೆ ಒತ್ತುವರಿಯಾಗಿದೆ ಎಂದು ಆರೋಪಿಸಿ ‘ನೈಬರ್‌ಹುಡ್ ವಾಚ್ ಕಮಿಟಿ’ಯು ಎನ್‌ಜಿಟಿಯಲ್ಲಿ ಪ್ರಕರಣ ದಾಖಲಿಸಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರಿಗೆ ಎನ್‌ಜಿಟಿ ಚೆನ್ನೈ ಪೀಠವು ಸೂಚಿಸಿತ್ತು.
ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಬೆಂಗಳೂರು ದಕ್ಷಿಣ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ಸರ್ವೆ ಸಂಖ್ಯೆ 90ರಲ್ಲಿನ ಕೊಳಚೆ ನಿರ್ಮೂಲನಾ ಮಂಡಳಿಯ ಎರಡು ಕಟ್ಟಡಗಳು, 30 ತಾತ್ಕಾಲಿಕ ಶೆಡ್‌ಗಳು ಹಾಗೂ ಬಿಡಿಎಗೆ ಸ್ವಾಧೀನವಾಗಿರುವ ಪ್ರದೇಶದಲ್ಲಿ 33 ಆರ್‌ಸಿಸಿ ಮನೆಗಳು ನಿರ್ಮಾಣವಾಗಿರುವುದು ಕಂಡು ಬಂದಿದೆ. ಈ ಕಟ್ಟಡಗಳು ರಾಜಕಾಲುವೆಯ 15 ಮೀಟರ್ ಮೀಸಲು ಪ್ರದೇಶದಲ್ಲಿವೆ ಎಂದು ಅವರು ವರದಿಯಲ್ಲಿ ಉಲ್ಲೇಖಿಸಿದ್ದರು. ನಗರ ಜಿಲ್ಲಾಧಿಕಾರಿ ಕೆ.ಜಗದೀಶ್ ಅವರು ಎನ್‌ಜಿಟಿಗೆ ಇದೇ 13ರಂದು ವರದಿ ಸಲ್ಲಿಸಿದ್ದರು.
ಹೀಗಾಗಿ, ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ ಮತ್ತು ತಜ್ಞ ಸದಸ್ಯ ಸತ್ಯಗೋಪಾಲ್ ಕೊರ್ಲಪಾಟಿ ಅವರಿದ್ದ ಪೀಠವು ಒತ್ತುವರಿ ತೆರವುಗೊಳಿಸುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.