ADVERTISEMENT

ಯಡಿಯೂರಪ್ಪ ಮಾತಿಗೆ ತಪ್ಪುವವರಲ್ಲ, ಶ್ರೀರಾಮಚಂದ್ರ ಇದ್ದಂತೆ: ನಿಡುಮಾಮಿಡಿ ಶ್ರೀ

ಮುಖ್ಯಮಂತ್ರಿಯನ್ನು ಕೊಂಡಾಡಿದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 13:13 IST
Last Updated 28 ಜನವರಿ 2020, 13:13 IST
ಜಚನಿ ಅಧ್ಯಯನ ಪೀಠ ಮತ್ತು ಸಂಶೋದನೆ ಸಂಸ್ಥೆ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಉದ್ಘಾಟಿಸಿದರು. ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಕಂದಾಯ ಸಚಿವ ಆರ್. ಅಶೋಕ, ವಸತಿ ಸಚಿವ ವಿ. ಸೋಮಣ್ಣ ಇದ್ದರು –ಪ್ರಜಾವಾಣಿ ಚಿತ್ರ
ಜಚನಿ ಅಧ್ಯಯನ ಪೀಠ ಮತ್ತು ಸಂಶೋದನೆ ಸಂಸ್ಥೆ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಉದ್ಘಾಟಿಸಿದರು. ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಕಂದಾಯ ಸಚಿವ ಆರ್. ಅಶೋಕ, ವಸತಿ ಸಚಿವ ವಿ. ಸೋಮಣ್ಣ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬಿ.ಎಸ್. ಯಡಿಯೂರಪ್ಪ ಅವರು ಶ್ರೀರಾಮಚಂದ್ರನಿದ್ದಂತೆ ಕೊಟ್ಟ ಮಾತಿಗೆ ತಪ್ಪುವವರಲ್ಲ’ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಬಣ್ಣಿಸಿದರು.

ಬಸವನಗುಡಿಯಲ್ಲಿನ ನಿಡುಮಾಮಿಡಿ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಜಚನಿ ಅಧ್ಯಯನ ಪೀಠ ಮತ್ತು ಸಂಶೋಧನಾ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೊಟ್ಟ ಮಾತಿಗೆ ತಪ್ಪಿದ ಮುಖ್ಯಮಂತ್ರಿ ಎಂಬ ಕಪ್ಪುಚುಕ್ಕೆ ಈಗಾಗಲೇ ಮುಖ್ಯಮಂತ್ರಿ ಆಗಿದ್ದವರೊಬ್ಬರಿಗೆ ಅಂಟಿಕೊಂಡಿದೆ. ಯಡಿಯೂರಪ್ಪ ಅವರು ಅವರಂತೆ ಅಲ್ಲ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚುನಾವಣೆ ನಡೆದಿದೆ. ಅವರ ನಾಯಕತ್ವಕ್ಕೆ ಜನ ಮನ್ನಣೆ ನೀಡಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸಲು ಬಿಜೆಪಿಯ ರಾಷ್ಟ್ರ ಮಟ್ಟದ ಮತ್ತು ರಾಜ್ಯ ಮಟ್ಟದ ನಾಯಕರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಮುಖ್ಯಮಂತ್ರಿಯಾದ ಬಳಿಕ ಹಲವು ಸಂಕಷ್ಟ, ಸವಾಲುಗಳನ್ನು ಯಡಿಯೂರಪ್ಪ ಎದುರಿಸುತ್ತಿದ್ದಾರೆ. ಸಂಪುಟದಲ್ಲಿ ಎಲ್ಲರಿಗೂ ಅವಕಾಶ ನೀಡುವುದು ಕಷ್ಟವಾಗುತ್ತದೆ. ಮೂರು ವರ್ಷಗಳ ಅವಧಿಯಲ್ಲಿ ಸಚಿವ ಸ್ಥಾನಗಳನ್ನು ಎರಡು ಹಂತದಲ್ಲಿ ಹಂಚಿಕೆ ಮಾಡಲು ಅವಕಾಶ ಇದೆ. ಶಾಸಕರೆಲ್ಲರೂ ಸಹಕಾರ ನೀಡಬೇಕು’ ಎಂದು ಹೇಳಿದರು.

‘ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಹಲವು ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಆದರೆ, ಆ ಸಮುದಾಯ ತಮ್ಮ ರಾಜಕೀಯ ನಾಯಕನೆಂದು ಒಪ್ಪಿಕೊಂಡಿದ್ದ ಯಡಿಯೂರಪ್ಪ ಒಬ್ಬರನ್ನೇ. ಎಲ್ಲಾ ಸಮುದಾಯದ ಜನರ ಏಳಿಗೆಗಾಗಿ ದುಡಿಯುವ ಯಡಿಯೂರಪ್ಪ ಅವರ ರೀತಿಯ ನಾಯಕರು ಮತ್ತೊಬ್ಬರಿಲ್ಲ’ ಎಂದು ಬಣ್ಣಿಸಿದರು.

ನಿಡುಮಾಮಿಡಿ ಮಠಕ್ಕೆ ₹3 ಕೋಟಿ
‘ನಿಡುಮಾಮಿಡಿ ಮಠದ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿಗೆ ₹3 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.

‘2018ರಲ್ಲಿ ‌ಮಠಕ್ಕೆ ಸರ್ಕಾರ ನೀಡಿರುವ 2 ಎಕರೆ ಜಮೀನು ಹಸ್ತಾಂತರಕ್ಕೆ ಇರುವ ತೊಡಕುಗಳನ್ನು ನಿವಾರಿಸಲು ಕಂದಾಯ ಸಚಿವರೊಂದಿಗೆ ಚರ್ಚಿಸಿದ್ದೇನೆ. ಮಠದ ಶಿಕ್ಷಣ ಸಂಸ್ಥೆಗಳಿಗೆ ಮುಂದೆಯೂ ಸಹಕಾರ ನೀಡಲಾಗುವುದು’ ಎಂದು ತಿಳಿಸಿದರು.

ಅಶೋಕ ಅವರಿಗೆ ಮುಖ್ಯಮಂತ್ರಿ ಯೋಗ
‘ಇಂದಲ್ಲ ನಾಳೆ ಮುಖ್ಯಮಂತ್ರಿಯಾಗುವ ಯೋಗ ಕಂದಾಯ ಸಚಿವ ಆರ್. ಅಶೋಕ ಅವರಿಗೂ ಇದೆ’ ಎಂದು ನಿಡುಮಾಮಿಡಿ ಸ್ವಾಮೀಜಿ ಹೇಳಿದರು.

‘ಯಡಿಯೂರಪ್ಪ ಅವರ ರೀತಿಯಲ್ಲಿ ಪಕ್ಷನಿಷ್ಠೆ, ಕರ್ತವ್ಯ ನಿಷ್ಠೆಯನ್ನು ಬೆಳಸಿಕೊಂಡರೆ ಮುಖ್ಯಮಂತ್ರಿ ಆಗುವ ಅವಕಾಶ ಇದೆ’ ಎಂದರು. ಇದರಿಂದ ಅಚ್ಚರಿಗೊಂಡ ಆರ್. ಅಶೋಕ ಅವರು ತಬ್ಬಿಬ್ಬಾಗಿ ಬಾಯಿ ಮೇಲೆ ಕೈ ಇಟ್ಟುಕೊಂಡು, ಒಮ್ಮೆ ಮುಖ ಒರೆಸಿಕೊಂಡರು.

‘ವಸತಿ ಸಚಿವ ವಿ. ಸೋಮಣ್ಣ ಅವರಿಗೂ ಈ ರೀತಿಯ ಸ್ಥಾನಗಳು ಸಿಗಲಿ’ ಎಂದು ಸ್ವಾಮೀಜಿ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.