ADVERTISEMENT

ಉಗ್ರರ ದಾಳಿಯಿಂದ ಸೈನಿಕರ ನೈತಿಕ ಬಲ ಕುಗ್ಗಿಲ್ಲ, ಪ್ರತೀಕಾರಕ್ಕೆ ಸಿದ್ಧ:ಸೀತಾರಾಮನ್

ಪುಲ್ವಾಮಾ ದಾಳಿಗೆ ಪಾಕ್ ವಿರುದ್ಧ ಕಿಡಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2019, 15:55 IST
Last Updated 19 ಫೆಬ್ರುವರಿ 2019, 15:55 IST
   

ಬೆಂಗಳೂರು: ಉಗ್ರರ ದಾಳಿಯಿಂದ ಸೈನಿಕರ ನೈತಿಕ ಬಲ ಕುಗ್ಗಿಲ್ಲ. ಯಾವುದೇ ರೀತಿಯ ಹೋರಾಟ ನಡೆಸಲು ಹಾಗೂ ಪ್ರತೀಕಾರ ತೀರಿಸಿಕೊಳ್ಳಲು ನಮ್ಮ ಯೋಧರು ಸಜ್ಜಾಗಿದ್ದಾರೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಿಂದ ಸೈನಿಕರ ನೈತಿಕ ಬಲ ಕುಸಿದಿದೆ ಎಂದುಕೊಂಡರೆ ಅದು ತಪ್ಪಾಗುತ್ತದೆ. ದಾಳಿ ಬಳಿಕ ದೇಶದ ಜನರು ನೀಡಿರುವ ಬೆಂಬಲವನ್ನು ನೋಡಿ ಸೈನಿಕರು ಉತ್ಸುಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವ್ಯಗ್ರವಾಗಿ ಉಗ್ರವಾದ ವಿರುದ್ಧ‌ ಹೋರಾಡಲಿದ್ದಾರೆ ಎಂದು ತಿಳಿಸಿದರು.

ಉಗ್ರರ ದಾಳಿ ಹಾಗೂ ಪಾಕಿಸ್ತಾನವು ಗಡಿಯಲ್ಲಿ ಮಾಡುವ ಪುಂಡಾಟಿಕೆ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಸೈನಿಕರಿಗೆ ಈಗಾಗಲೇ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಇದರೊಂದಿಗೆ ನಮ್ಮ ಇಲಾಖೆ ಹಾಗೂ ದೇಶದ ಜನರು ನೈತಿಕ ಬೆಂಬಲ ನೀಡಿರುವುದರಿಂದ ಯೋಧರು ತಮ್ಮ ಕೆಲಸದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ADVERTISEMENT

ಪಾಕ್ ಪ್ರಧಾನಿಗೆ ತಿರುಗೇಟು: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪುಲ್ವಾಮಾ ಉಗ್ರರ ದಾಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ. ಈ ದಾಳಿಗೆ ಸಾಕ್ಷ್ಯ ಕೇಳುವ ಬದಲು, ಮುಂಬಯಿ ದಾಳಿಯಿಂದ ಇಲ್ಲಿಯವರೆಗೆ ನಡೆದ ಅನೇಕ ಉಗ್ರ ದಾಳಿಗಳ ಬಗ್ಗೆ ಸಾಕ್ಷಿ ನೀಡಿದ್ದಾಗ ಪಾಕಿಸ್ತಾನ ಯಾವ ರೀತಿಯ ಕ್ರಮ ಕೈಗೊಂಡಿದೆ ಎಂಬುದನ್ನು ತಿಳಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುಲ್ವಾಮಾ ದಾಳಿಗೆ ಸಂಬಂಧಿಸಿ ತನಿಖೆ ಪೂರ್ಣಗೊಳ್ಳುವವರೆಗೆ ಮತ್ತು ಸಿಆರ್‌ಪಿಎಫ್, ಭದ್ರತಾ ತಂಡಗಳು ವರದಿ ನೀಡುವ ತನಕ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಚಿವರು ಹೇಳಿದರು.

ಏರೋ ಇಂಡಿಯಾ ತಾಲೀಮಿನ ವೇಳೆಸೂರ್ಯಕಿರಣ್ ಯುದ್ಧವಿಮಾನ ಅಪಘಾತಕ್ಕೀಡಾದ ಕುರಿತು ತನಿಖೆ ಪ್ರಗತಿಯಲ್ಲಿದೆ. ವರದಿ‌ ದೊರೆಯದೆ ಯಾವುದೇ ಹೇಳಿಕೆ ನೀಡುವುದು ಸರಿಯಲ್ಲ‌ ಎಂದು ನಿರ್ಮಲಾ ಅವರು ಹೇಳಿದರು.

ಸೂರ್ಯಕಿರಣ್ ಅನುಮಾನ

ಏರೋ ಇಂಡಿಯಾ ಆರಂಭವಾಗುವ ಮುನ್ನಾ ದಿನ ತಾಲೀಮು ನಡೆಸುವಾಗ ಅಪಘಾತಕ್ಕೊಳಗಾದ ಲಘುಯುದ್ಧ ವಿಮಾನ ಸೂರ್ಯಕಿರಣ್ ಈ ಬಾರಿಯ ಏರೋ ಇಂಡಿಯಾದಲ್ಲಿ ಭಾಗವಹಿಸುವುದು ಅನುಮಾನ ಎನ್ನುವ ಮಾತುಗಳು ಕೇಳಿಬಂದಿದೆ. ಈ ಬಗ್ಗೆ ಏರ್ ಮಾರ್ಷಲ್ ರಾಕೇಶ್ ಕುಮಾರ್ ಮಾತನಾಡಿದ್ದು, ತನಿಖೆ ಮುಗಿಯುವ ತನಕ ಸೂರ್ಯಕಿರಣ್ ಹಾರಾಟ ನಡೆಸುವುದಿಲ್ಲ. ಆದ್ದರಿಂದ ಮೊದಲ‌ದಿನದ ವೈಮಾನಿಕ ಪ್ರದರ್ಶನದಲ್ಲಿ ಸೂರ್ಯಕಿರಣ್ ಇರುವುದಿಲ್ಲ.‌ ನಂತರ ದಿನದ ವರದಿ ನೋಡಿಕೊಂಡು ಕ್ರಮ‌ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

****
9 ವಿಮಾನದೊಂದಿಗೆ ಪ್ರದರ್ಶನ ನೀಡುವ ಏಕೈಕ ತಂಡ ಭಾರತೀಯ ವಾಯುಪಡೆಯ ಸೂರ್ಯಕಿರಣ್. 4–5 ಕಿ.ಮೀ. ಅಂತರದಲ್ಲಿ‌ ಒಂದೊಂದು ವಿಮಾನ ಇರುತ್ತದೆ. ಅಪಘಾತಕ್ಕೆ ಪೈಲಟ್‌ಗಳ ವೈಫಲ್ಯ ಕಾರಣವೇ, ಹಕ್ಕಿ ಡಿಕ್ಕಿಯಾಯಿತೇ ಅಥವಾ ತಾಂತ್ರಿಕ ಸಮಸ್ಯೆ ಎದುರಾಯಿತೇ ಎನ್ನುವುದು ತನಿಖೆಯಿಂದ ತಿಳಿಯಬೇಕಿದೆ.
–ರಾಕೇಶ್ ಕುಮಾರ್ ಸಿಂಗ್ ಬಧುರಿಯಾ, ಏರ್ ಮಾರ್ಷಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.